ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಣೆ ಮಾಡಿರುವ ಬಜೆಟ್ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅಪಾರ ಜ್ಞಾನ, ಬಡವರ ಬಗ್ಗೆ ಬಿಜೆಪಿ ಸರ್ಕಾರಕ್ಕಿರುವ ಕಾಳಜಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ ಎತ್ತಿ ಹಿಡಿಯುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯ ಕನಸನ್ನು ನನಸು ಮಾಡುವಂತಹ ಪೂರಕವಾದ ಬಜೆಟ್ ಇದಾಗಿದೆ ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಇದಾಗಿದೆ ಎಂದರು. ಇಂದು ಘೋಷಣೆ ಮಾಡಿರುವ ಬಜೆಟ್ ಮೂಲಸೌಕರ್ಯ, ಅಭಿವೃದ್ಧಿ, ಹೂಡಿಕೆಗೆ ಒತ್ತು ನೀಡಲಾಗಿದೆ ಎಂದರು.
ಇದನ್ನೂ ಓದಿ : 70ರ ಮುದುಕನಿಗೆ ಹುಡುಗಿಯರ ಹುಚ್ಚು, ಅದಕ್ಕಾಗಿ ಕಳ್ಳತನ : ಚಪಲ ಚೆನ್ನಿಗರಾಯ ಅರೆಸ್ಟ್
ಕಾರ್ಮಿಕ ,ದಲಿತ,ರೈತ,ಮಹಿಳೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಉತ್ತರ ಕರ್ನಾಟಕ ಹಳೆ ಮೈಸೂರು ಮಧ್ಯಕರ್ನಾಟಕ ಬೆಂಗಳೂರು ಪ್ರಾದೇಶಿಕ ಸಮತೋಲನದೊಂದಿಗೆ ಕನ್ನಡ ನಾಡಿನ ಅಭಿವೃದ್ಧಿಗೆ ಇಂದು ಮಂಡನೆಯಾಗಿರುವ ರಾಜ್ಯ ಬಜೆಟ್ ಜನಸ್ನೇಹಿ ಮತ್ತು ಜನ ಸಾಮಾನ್ಯರ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಕುರಿತು ಹೇಳಿದರು ಹಾಗೂ ರೈತರು, ಬಡವರು, ಮಹಿಳೆಯರು, ವಿದ್ಯಾರ್ಥಿಗಳು ಹೀಗೆ ಎಲ್ಲಾ ವರ್ಗದವರಿಗೂ ಬಜೆಟ್ ನಲ್ಲಿ ಪಾಲು ನೀಡಿರುವುದು ಅತ್ಯಂತ ಸ್ವಾಗತಾರ್ಹ ಎಂದರು.
ನೀರಾವರಿ ಯೋಜನೆಗಳಿಗೆ ಅನುದಾನದ ಮಹಾಪೂರ :
ಪ್ರಸ್ತುತ ಬಜೆಟ್ ನಲ್ಲಿ ಪ್ರಮುಖ ನೀರಾವರಿ ಯೋಜನೆಗಳಿಗೆ ದೊರೆತ ಅನುದಾನ ಹೆಚ್ಚಿನದಾಗಿದೆ ಎಂದ ಅವರು 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ, ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ 1ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ, ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ, ಮೇಕೆದಾಟು ಯೋಜನೆಗೆ ಒಂದು ಸಾವಿರ ಕೋಟಿ, ತುಂಗಭದ್ರಾ ಜಲಾಶಯದ ನೀರು ಸಂಗ್ರಹ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ, 8,774 ಕೋಟಿ ಮೊತ್ತದ ಹೊಸ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಮತ್ತು ರಾಜ್ಯಗಳ ಕೆರೆ ಅಭಿವೃದ್ಧಿಗೆ 500 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಲು ಬಜೆಟ್‌ನಲ್ಲಿ ರೂಪಿಸಲಾಗಿದೆ. ಇದಕ್ಕಿಂತ ಜನಪ್ರಿಯ ಬಜೆಟ್ ಅನ್ನು ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಯಾರೂ ಮಂಡಿಸಲಿಲ್ಲ ಎಂದು ಬಜೆಟ್ ನ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
ಕುಡಿಯುವ ನೀರಿಗೆ ವಿಶೇಷ ಅನುದಾನ, ಗ್ರಾಮೀಣ ಮಕ್ಕಳಿಗೆ ನೀಟ್ ತರಬೇತಿ, ಬಡವರಿಗೆ ಉಚಿತ ಕಣ್ಣಿನ ಚಿಕಿತ್ಸೆ, ಮುಜರಾಯಿ ದೇವಾಲಯಗಳಿಗೆ ಸ್ವಾಯತ್ತತೆ ಹೀಗೆ ಹಲವು ಹೊಸತುಗಳಿಗೆ ಬಜೆಟ್‌ನಲ್ಲಿ ಮುನ್ನುಡಿ ಬರೆಯಲಾಗಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರೂಫ್‌ವೇ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ 100 ಕೊಟಿ ರೂಪಾಯಿ ಅನುದಾನ.
ಚಿಕ್ಕಮಗಳೂರಿಗೆ ಅತ್ಯುತ್ತಮ ಕೊಡುಗೆ :
ಚಿಕ್ಕಮಗಳೂರು ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿದ್ದಾರೆ. ಕಾಫಿ ನಾಡಿನ ಜನತೆಗೆ ಮುಖ್ಯಮಂತ್ರಿಗಳು ವಿಶೇಷ ಆದ್ಯತೆ ನೀಡಿರುವುದು ಸಂತೋಷ ತಂದಿದೆ ಎಂದರು ಹಾಗೂ ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ಸ್ಥಾಪನೆಗೆ ಮುಂದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ರೋಪ್ ವೇ ಹಾಗೂ ಚಿಕ್ಕಮಗಳೂರಿಗೆ ಹೆಲಿಪೋರ್ಟ್ ಗಾಗಿ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿರುವುದು ಸಂತೋಷದ ವಿಷಯ. ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸಿಆರ್‌ಜೆಡ್ ಮಾನದಂಡಗಳನ್ನು ಸಡಿಲಿಸುವಂತೆ ಕೇಂದ್ರದ ಅನುಮೋದನೆ ಪಡೆಯಲು ಕ್ರಮ ಮತ್ತು ʼತಬಡಿʼ ಬಂದರಿನಲ್ಲಿ ಪರಿಸರ–ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ ಮತ್ತು ಪಾರಂಪರಿಕ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ ಹಾಗೂ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ನೆರವಾಗುವಂತಹ 'Adopt a Monument' ಯೋಜನೆ ಜಾರಿ.
ರಾಜ್ಯದ ಜನರ ಪರಿಸ್ಥಿತಿಯನ್ನು ಅರಿತು ಜನರಿಗೆ ಅವಶ್ಯಕವಾಗಿ ಬೇಕಾಗಿರುವ ಎಲ್ಲವನ್ನು ತಕ್ಕಮಟ್ಟಿಗೆ ಈ ಬಜೆಟ್ ಮೂಲಕ ತಲುಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಎಲ್ಲಾ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

0 Comments