ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನದ ತೋಟವೊಂದರಲ್ಲಿ ಆನೆ ದಾಳಿ ನಡೆದಿದ್ದು ಇಬ್ಬರು ಕಾರ್ಮಿಕರು ಅನೆಯ ಕಾಲ್ತುಳಿತಕ್ಕೆ ಸಿಲುಕಿ ಬಲಿಯಾಗಿರುವ ದುರ್ಘಟನೆ  ಸಂಭವಿಸಿದೆ. 

ಇದನ್ನೂ ಓದಿ : ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದ ಶಾರದಾ ಎಸ್ಟೇಟ್ ನಲ್ಲಿ ಇಂದು ಬೆಳಗಿನ ಸಮಯ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರು ಆನೆ ದಾಳಿಗೆ ಬಲಿಯಾಗಿದ್ದಾರೆ. ಗುಂಪಿನಿಂದ ತಪ್ಪಿಸಿಕೊಂಡ ಆನೆಯೊಂದು ತೋಟದ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದು ಆನೆಯ ಕಾಲ್ತುಳಿತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳನ್ನು ಚಿಕ್ಕಯ್ಯ(65) ಹಾಗೂ ಈರಯ್ಯ(68) ಎಂದು ಗುರುತಿಸಲಾಗಿದೆ. 

ಈ ಭಾಗದಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಈ ಕುರಿತು ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮುಖ್ಯಮಂತ್ರಿಗಳು ಬರುವಂತೆ ಆಗ್ರಹಿಸಿದ್ದಾರೆ.

ಕಾಡಾನೆಗಳ ದಾಳಿಗೆ ಸಾರ್ವಜನಿಕರು ತೊಂದರೆಗೀಡಾಗಿದ್ದರೆ, ಈ ಸಮಸ್ಯೆ ಇಂದೇ ಅಂತ್ಯ ಕಾಣಬೇಕು ಸರ್ಕಾರ ಈ ಕುರಿತು ಹೆಚ್ಚಿನ ಗಮನಹರಿಸಬೇಕು, ಎಷ್ಟೋ ಜನರ ಜೀವನವನ್ನು ಆನೆ ಬಲಿ ಪಡೆದಿದೆ ಆ ಸಾವುಗಳಿಗೆ ಇಲ್ಲಿಯವರೆಗೂ ನ್ಯಾಯ ದೊರೆತಿಲ್ಲ ಪರಿಹಾರವೂ ಲಭಿಸಿಲ್ಲ. ಇದೇನು ಈ ಭಾಗದಲ್ಲಿ ನಡೆದ ಮೊದಲ ಪ್ರಕರಣವಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಒಂದೆಡೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ಆನೆ ನಾಶ ಮಾಡುತ್ತಿದ್ದರೆ ಇನ್ನೊಂದೆಡೆ ಆನೆಗೆ ಹೆದರಿ ತೋಟದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಳಲನ್ನು ಕೃಷಿಕರು ಹೊರಹಾಕಿದ್ದಾರೆ ಮತ್ತು ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.