ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಯುವಕನೋರ್ವ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಟ್ರಾನ್ಸ್ಫಾರ್ಮರ್ ನಲ್ಲಿ ಉಂಟಾದ ಅವಘಡದಿಂದಾಗಿ ಮೃತಪಟ್ಟಿರುವ ದುರ್ಘಟನೆ ಕಳೆದರಾತ್ರಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದ ಸಚಿನ್ ವಿದ್ಯುತ್ ತಗುಲಿ ಸಾವನ್ನಪ್ಪಿದ ದುರ್ದೈವಿ. ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಟ್ರಾನ್ಸ್ಫಾರ್ಮರ್ ನಲ್ಲಿ ಉಂಟಾದ ಅವಘಡದಿಂದ ಸಚಿನ್ ರವರಿಗೆ ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಸಚಿನ್ ಅವರನ್ನು ಕೂಡಲೇ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಚಿನ್ ಕೊನೆಯುಸಿರೆಳೆದಿದ್ದಾರೆ. ಕೃಷಿಕರಾಗಿದ್ದ ಸಚಿನ್ ಅವರು ಅನೇಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಊರಿನವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಬಳಿ ಅನೇಕರು ಜಮಾವಣೆಗೊಂಡಿದ್ದರು. 

ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಮಗನನ್ನು ಕಳೆದುಕೊಂಡ ಪೋಷಕರು ಅತ್ಯಂತ ದುಃಖದ ಪರಿಸ್ಥಿತಿಯಲ್ಲಿದ್ದಾರೆ. ಸಚಿನ್ ಅವರನ್ನು ಕಳೆದುಕೊಂಡಿರುವ ಸ್ನೇಹಿತರು, ಪರಿಚಯಸ್ಥರು ಹಾಗೂ ಕುಟುಂಬ ವರ್ಗ ಕಂಬನಿ ಮಿಡಿದಿದೆ.