ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಒಂದು ತಿಂಗಳಿನಿಂದ ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದ ಹಿಜಾಬ್ ಕೇಸರಿ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಒಂದು ವಾರಗಳ ಕಾಲ ವಾದ ವಿವಾದ ಆಲಿಸಿದ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜೆಎಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಹಿಜಾಬ್ ಹಾಗೂ ಕೇಸರಿ ಶಾಲಿನ ನಡುವೆ ಇಷ್ಟು ದಿನಗಳ ಕಾಲ ನಿರಂತರವಾಗಿ ನಡೆದ ವಿವಾದವು ಇಂದು ನ್ಯಾಯಾಲಯದಲ್ಲಿ ಬಗೆಹರಿದು ಸರ್ಕಾರದ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ವಸ್ತ್ರಗಳ ಮುಖಾಂತರವಾಗಿ ವಿದ್ಯಾರ್ಥಿಗಳು ಗುರುತಿಸಿಕೊಳ್ಳುವ ಬದಲು ಇಡೀ ವಿದ್ಯಾರ್ಥಿ ಸಮೂಹವೇ ಒಂದು ಎಂಬಂತೆ ಪ್ರಕಟಗೊಳ್ಳುವುದು ಉತ್ತಮ. ಜಾತಿ ಮತ ಪಂಥ ಯಾವುದನ್ನು ಗುರುತಿಸದೇ ಇಡೀ ವಿದ್ಯಾರ್ಥಿ ಸಮುದಾಯ ಒಂದೇ ಎಂಬ ಸಂದೇಶ ಸಾರುವ ತೀರ್ಪನ್ನು ಇಂದು ತ್ರಿಸದಸ್ಯ ಪೀಠ ಎತ್ತಿ ಹಿಡಿದಿರುವುದು ಸ್ವಾಗತಾರ್ಹ ಎಂದರು.
ಕಲಿಕೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಮನಸ್ಸಿನ ತುಂಬಾ ಜಾತಿ, ಪಂಥ, ಮತ ಬೇಧವನ್ನು ಬಿತ್ತದೇ ಇರಬೇಕು ಎಂಬ ಕಾರಣಕ್ಕೆ ವಸ್ತ್ರ ಸಂಹಿತೆ ಇರುವುದು. ನ್ಯಾಯಾಲಯ ಪ್ರಕಟಿಸಿರುವ ತೀರ್ಪು ಎಲ್ಲರಿಗೂ ಹಿತವಾಗಿದೆ ಹಾಗೂ ಅದನ್ನು ನಾವು ಶಿರಸಾ ಒಪ್ಪಲೇಬೇಕು ಎಂದರು.
ಯುವ ಜನತೆಯಲ್ಲಿ ವಿಷ ಬೀಜ ಬಿತ್ತದೇ ಅವರಿಗೆ ಪ್ರಚೋದನೆ ನೀಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡುತ್ತೇನೆ. ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರು ಒಂದೇ ಭಾರತ ಮಂದಿರ ಎಂಬಂತೆ ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಸಹಬಾಳ್ವೆಯನ್ನು ನಡೆಸಿಕೊಂಡು ಹೋಗುತ್ತಲಿದ್ದೇವೆ. ಅದನ್ನೇ ಮುಂದುವರೆಸಿಕೊಂಡು ಮುಂದೆ ಸಾಗೋಣ, ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಹಕಾರ ನೀಡೋಣ ಎಂದಿದ್ದಾರೆ.
ಹೈಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?
- ಹಿಜಾಬ್ ಧರಿಸುವುದು ಇಸ್ಲಾಂನ ಧಾರ್ಮಿಕ ಅತ್ಯಗತ್ಯ ಪದ್ದತಿಯಲ್ಲ. ಹಾಗಾಗಿ ಅದಕ್ಕೆ ಸಂವಿಧಾನದ ಕಲಂ 25ರಡಿ ರಕ್ಷಣೆ ನೀಡಲಾಗದು
- ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಮಾಡುವ ಅಧಿಕಾರ ಸರಕಾರಕ್ಕೆ ಇದೆ, ಕಾನೂನಿನಲ್ಲೂ ಅದಕ್ಕೆ ಮಾನ್ಯತೆ ಇದೆ. ಸಮವಸ್ತ್ರ ನಿಗದಿ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದು, ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದು.
- ಸರಕಾರದ ಫೆ.5ರ ಆದೇಶ ಕಾನೂನು ಬದ್ಧವಾಗಿದೆ, ಅಂತಹ ಆದೇಶ ಹೊರಡಿಸಲು ಸರಕಾರಕ್ಕೆ ಅಧಿಕಾರವೂ ಇದೆ. ಸರಕಾರ ಕೆಲವೊಂದು ನಿರ್ಬಂಧಗಳನ್ನು ಹೇರಬಹುದಾಗಿದೆ.
- ಪ್ರಕರಣದಲ್ಲಿ ಅರ್ಜಿದಾರರು ಎತ್ತಿರುವ ವಾದಾಂಶದಲ್ಲಿ ಯಾವುದೇ ಹುರುಳಿಲ್ಲ. ಮತ್ತು ಸರ್ಕಾರ ವಸ್ತ್ರ ಸಂಹಿತೆ ಸಂಬಂಧ ನೀಡಿರುವ ನಿರ್ದೇಶನ ಸರಿ ಇದೆ. ಹಾಗಾಗಿ ಅರ್ಜಿದಾರರ ವಾದದಲ್ಲಿ ಯಾವುದೇ ಮೆರಿಟ್ ಇಲ್ಲವಾದ್ದರಿಂದ ಈ ಅಂಶ ಪರಿಗಣಿಸಲಾಗದು.
ಸರ್ಕಾರದ ವಾದ ಏನಿತ್ತು?
ಧಾರ್ಮಿಕ ಸಂಕೇತಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಬಳಕೆ ಮಾಡಬಾರದು ಎಂಬುದು ಸರ್ಕಾರದ ನಿಲುವು. ಆದರೆ ಯಾವುದನ್ನು ಧಾರ್ಮಿಕ ಸಂಕೇತ ಎಂದು ಪರಿಗಣಿಸಬೇಕು, ಯಾವುದನ್ನು ಪರಿಗಣಿಸಬಾರದು ಎಂಬುದನ್ನು ಶಿಕ್ಷಣ ಸಂಸ್ಥೆಗಳಿಗೆ ಬಿಡಲಾಗಿದೆ.
ಸಿಡಿಸಿ 1983ರ ಶಿಕ್ಷಣ ಕಾಯ್ದೆಯ ಅನುಗುಣವಾಗಿ ಸಮವಸ್ತ್ರ ಜಾರಿಗೆ ತಂದಿದೆ. ಸಮವಸ್ತ್ರ ಜಾರಿಗೆ ತರುವುದು ಸಮಾನತೆಗಾಗಿ. ಸಿಡಿಸಿಗೆ ಸಮವಸ್ತ್ರ ಜಾರಿಗೆ ತರುವ ಅವಕಾಶ 2014ರಲ್ಲಿ ಒಪ್ಪಿಗೆ ಇತ್ತು. ಸಿಡಿಸಿಗೆ ಕಾಲೇಜಿನ ಅಭಿವೃದ್ಧಿ ಸಮಿತಿ, ಕಾಲೇಜಿನ ಬಗ್ಗೆ ತೀರ್ಮಾನಿಸುವ ಅಧಿಕಾರವಿದೆ. ಸಿಡಿಸಿಯಲ್ಲಿ ಒಬ್ಬರೇ ಅಧಿಕಾರ ಚಲಾಯಿಸುವುದಿಲ್ಲ. ಶಾಲೆಯ ಮಕ್ಕಳು, ಪೋಷಕರು, ಶಾಸಕರು, ಉಪನ್ಯಾಸಕರು ಎಲ್ಲರು ಇರುತ್ತಾರೆ.

0 Comments