ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು. 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಆದಿಚುಂಚನಗಿರಿ ಸಮುದಾಯಭವನದಲ್ಲಿ ನಡೆದ ರೋವರ್ಸ್ ರೇಂಜರ್ಸ್ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಚಾರಣ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ಡಿ ರಾಜೇಗೌಡ ಸೇರಿದಂತೆ ಸ್ಕೌಟ್ಸ್ ಗೈಡ್ಸ್ ನ ಹಿರಿಯ ಅಧಿಕಾರಿಗಳು ಹಾಗೂ ಅನೇಕ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶೃಂಗೇರಿಯ ಕಾಳಿಕಾಂಬಾ ದೇವಸ್ಥಾನದ ಸಮೀಪದಲ್ಲಿ ನೂತನ ಸ್ಕೌಟ್ಸ್-ಗೈಡ್ಸ್ ಕಚೇರಿ ನಿರ್ಮಾಣದ ಸಲುವಾಗಿರುವ ಜಾಗದಲ್ಲಿ ಕಚೇರಿ ನಿರ್ಮಾಣಕ್ಕೂ ಮೊದಲು ನಡೆಯುವ ಅಡಿಗಲ್ಲು ಹಾಕುವ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ನಂತರದಲ್ಲಿ ನಡೆದ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಚಾರಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ರಾಜೇಗೌಡ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ನಾನು ಕೂಡ ಸ್ಕೌಟ್ಸ್ ಗೈಡ್ಸ್ ಸೇರಿದ್ದೆ ಜೀವನದಲ್ಲಿ ಶಿಸ್ತು ಹಾಗೂ ಸಂಯಮವನ್ನು ಅಳವಡಿಸಿಕೊಳ್ಳುವ ದೃಷ್ಟಿಯಿಂದ ಸ್ಕೌಟ್ಸ್ ಗೈಡ್ಸ್ ಎಲ್ಲರಿಗೂ ಸಹಕಾರಿಯಾಗಲಿದೆ. ಜೀವನಪೂರ್ತಿ ಈ ಸೇವೆ ಸಲ್ಲಿಸುವ ಅವಕಾಶ ಸ್ಕೌಟ್ಸ್ ಗೈಡ್ಸ್ ಮತ್ತು ರೋವರ್ಸ್ ರೇಂಜರ್ಸ್ ನಿಂದ ಲಭಿಸುತ್ತದೆ ಎಂದರು. ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಸ್ಕೌಟ್ಸ್ ಗೈಡ್ಸ್ ಕಛೇರಿಗೆ ಅತೀ ಶೀಘ್ರವಾಗಿ ಧನ ಸಹಾಯ ಮಾಡುವ ಭರವಸೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್ ಸಿಂಧ್ಯಾ, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಗಂಗಪ್ಪಗೌಡ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಆಯುಕ್ತರಾದ ಶ್ರೀ ಎ.ಎನ್ ಮಹೇಶ್, ಶ್ರೀಮತಿ ಮಮತ ಡಿ.ಎಸ್, ಜೆ.ಸಿ.ಬಿ.ಎಂ ಕಾಲೇಜಿನ ಅನುಶ್ರೀ ಉಪಸ್ಥಿತರಿದ್ದರು.