ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಪುನೀತ್ ರಾಜಕುಮಾರ್ ಅಭಿಮಾನಿಗಳು ಅನೇಕ ವಿಧಗಳಲ್ಲಿ ಆಚರಣೆ ಮಾಡುತ್ತಿದ್ದಾರೆ, ಅಂತೆಯೇ ಇಂದು ಶೃಂಗೇರಿಯಲ್ಲಿ ಡಾ.ಪುನೀತ್ ರಾಜಕುಮಾರ್ ಬಸ್ ನಿಲ್ದಾಣದ ಉದ್ಗಾಟನಾ ಕಾರ್ಯಕ್ರಮ ನಡೆಯಿತು. 

ಇದನ್ನೂ ಓದಿ : ಶಿವಮೊಗ್ಗ : ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಮುಸ್ಲಿಂ ಜೋಡಿ, ಹೆರಿಗೆಯಾದ ಐದೇ ದಿನಕ್ಕೆ ಯುವತಿ ಸಾವು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಡಿಕಲ್ಲು ಬಸ್ ನಿಲ್ದಾಣಕ್ಕೆ ಕನ್ನಡದ ಶ್ರೇಷ್ಠ ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನಿಟ್ಟು ಶೃಂಗೇರಿಯ ಸರ್ಕಲ್ ಇನ್ಸ್ಪೆಕ್ಟರ್ ಮುತ್ತುರಾಜ್ ಅವರು ಉದ್ಘಾಟನೆ ಮಾಡಿದರು. ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಗಡಿಕಲ್ಲು ಈ ಕಾರ್ಯಕ್ರಮದ  ಆಯೋಜನೆ ಮಾಡಿತ್ತು. ಈ  ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯುವಕರೇ ಆಯೋಜಿಸಿದ್ದರು. 

ಈ ಕುರಿತು ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಮುತ್ತುರಾಜ್ ಅವರು ಯುವಜನತೆ ಪುನೀತ್ ರಾಜಕುಮಾರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಜನರ ಒಳಿತಿಗಾಗಿ ಶ್ರಮಿಸಬೇಕು ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದರು. 

ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸ್ಥಳೀಯರು, ಯುವಕರು ಹಾಜರಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಮುತ್ತುರಾಜ್ ಅವರಿಗೆ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ನೆನಪಿನ ಕಾಣಿಕೆ ಮೂಲಕ ನೀಡಿ ಗೌರವಿಸಿದರು.