ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ನಗರಸಭೆ ಅಧಿಕಾರಿಗಳು ಇಂದು ಬೆಳಗ್ಗೆ ನಗರಸಭೆ ಆಯುಕ್ತರಾದ ಬಸವರಾಜ್ ನೇತೃತ್ವದಲ್ಲಿ ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ವಿವಾದಿತ ಜಾಗವನ್ನು ಸರ್ವೆ ಮಾಡಲು ತೆರಳಿದ್ದಾರೆ ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಮುಸ್ಲಿಂ ಧರ್ಮೀಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಡಾಮಕಾನ್ ವ್ಯಾಪ್ತಿಯಲ್ಲಿ ನಮ್ಮ ಜಾಗವಿದೆ ಈ ಕುರಿತಾಗಿ ನಾವು ದಾಖಲೆಗಳನ್ನು ಹೊಂದಿದ್ದೇವೆ, ನಮ್ಮ ಜಾಗವನ್ನು ನಮಗೆ ಅಳತೆ ಮಾಡಿ ನೀಡಬೇಕು ಎಂದು ದಿವಾಕರ್ ಎಂಬುವವರು ನಗರಸಭೆಗೆ ಮನವಿ ಸಲ್ಲಿಸಿದ್ದರು. ಅಂತೆಯೇ ಇಂದು ಬೆಳ್ಳಂಬೆಳಗ್ಗೆ ನಗರಸಭೆ ಅಧಿಕಾರಿಗಳ ತಂಡ ಒತ್ತುವರಿ ಮಾಡಲಾಗಿದೆ ಎಂಬ ಜಾಗದ ಅಳತೆ ನಡೆಸುವ ಪ್ರಕ್ರಿಯೆ ಆರಂಭಿಸಿದೆ. 

ಇದನ್ನೂ ಓದಿ : ಶೃಂಗೇರಿ : ಲಾರಿ ಹಾಗೂ ಕಾರಿನ ನಡುವೆ ರಸ್ತೆ ಅಪಘಾತ ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಧರ್ಮೀಯರು ಪ್ರತಿರೋಧ ವ್ಯಕ್ತಪಡಿಸಿದರು. ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ತಡೆಯಾಜ್ಞೆ ಇರುವ ಸಂದರ್ಭದಲ್ಲಿ ಈ ರೀತಿಯಾಗಿ ಅಧಿಕಾರಿಗಳು ನಡೆದುಕೊಳ್ಳುವುದು ಸರಿಯಲ್ಲ, ಈ ಸ್ವತ್ತಿನ ವಿಚಾರ ಹೈ ಕೋರ್ಟ್ ನಲ್ಲಿದೆ ಅದರ ಮಧ್ಯೆ ಅಧಿಕಾರಿಗಳು ಅಳತೆ ಮಾಡುವುದು ಸಮಂಜಸವಲ್ಲ ಎಂದು ಜಾಮಿಯಾ ಮಸೀದಿಯ ಪದಾಧಿಕಾರಿಗಳು ವಾದಿಸಿದರು. 

ನಗರಸಭೆಯ ಸದಸ್ಯ ಶಬಾದ್, ಮುಸ್ಲಿಂ ಸಮುದಾಯದ ಮುಖಂಡರು, ಜಾಮಿಯಾ ಮಸೀದಿ ಆಡಳಿತ ಸಂಸ್ಥೆಯವರು, ಮುಸ್ಲಿಂ ಸಮುದಾಯದವರು ಈ ಕುರಿತು ಪ್ರತಿಭಟನೆ ನಡೆಸಿದರು ಹಾಗೂ ನಗರಸಭೆಯ ನಿರ್ಣಯ ಸರಿಯಲ್ಲ ಎಂದು ಆರೋಪಿಸಿದರು. 

ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಈ ಎಲ್ಲಾ ಕಾರ್ಯಗಳು ನಡೆಯುತ್ತಿದ್ದು, ಚಿಕ್ಕಮಗಳೂರಿನ ಬಸವನಹಳ್ಳಿ ಕಡೆಯಿಂದ ಈ ಜಾಗವನ್ನು ಸಂಪರ್ಕಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಗಳ ಅಳವಡಿಕೆಯಾಗಿದೆ. ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಬಂದೋಬಸ್ತ್ ನಲ್ಲಿದ್ದಾರೆ. 

ಅಲ್ಲೇ ಇದ್ದ ಖಾಲಿ ಜಾಗದ ಗೇಟಿನ ಬೀಗ ಒಡೆದು ಒಳ ನುಗ್ಗಿದ ನಗರಸಭೆಯ ಸಿಬ್ಬಂದಿಗಳು ಬೆಳೆದಿದ್ದ ಹುಲ್ಲುಗಳನ್ನು ಕಟಾವು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಈ ಎಲ್ಲಾ ಕಾರ್ಯಗಳೂ ಪೊಲೀಸರ ಬಂದೋಬಸ್ತ್ ಮುಖಾಂತರವಾಗಿ ನಡೆಯುತ್ತಿದೆ. 

ಈ ಹಿಂದೆ 2017ರಲ್ಲಿ ಸ್ಥಳೀಯ ನ್ಯಾಯಾಲಯದ ತೀರ್ಪಿನಂತೆ ಇದು ನಮ್ಮ (ಮಠದ ಮನೆಯವರ) ಜಾಗ ಎಂದು ತೀರ್ಪು ಬಂದಿತ್ತು ಎಂದು ದಿವಾಕರ್ ಅವರ ಪುತ್ರ ತಿಳಿಸಿದ್ದಾರೆ. ಆದರೆ ಮಸೀದಿ ಕಮಿಟಿ  ವತಿಯಿಂದ ತೀರ್ಪಿನ ವಿರುದ್ಧ ಹೈಕೋರ್ಟ್ ಮೊರೆ ಹೋಗಲಾಗಿತ್ತು.