ಕಡೂರು : (ನ್ಯೂಸ್ ಮಲ್ನಾಡ್ ವರದಿ) ಎರಡು ದಿನಗಳ ಹಿಂದೆ ಮನೆ ಬಿಟ್ಟು ಹೋದ ಯುವಕ ಶವವಾಗಿ ಪತ್ತೆಯಾದ ದುರ್ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಎಸ್.ಬಿ ಮಧು (32) ಸಾಲ ಬಾಧೆಯಿಂದಾಗಿ ಆತ್ಮಹತ್ಯೆ ಶರಣಾಗಿದ್ದಾನೆ. ಸಾಲ ಬಾಧೆಯಿಂದ ಮಧು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮಧು ಸೊಸೈಟಿ ಮತ್ತು ಸ್ವ ಸಹಾಯ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ, ಮಾಡಿದ ಸಾಲವನ್ನು ತೀರಿಸಲಾರದೇ ಜಿಗುಪ್ಸೆಗೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 2 ದಿನಗಳ ಹಿಂದೆ ಮಧು ಯಾರಿಗೂ ಹೇಳದೆ ಮನೆಯಿಂದ ತೆರಳಿದ್ದ, ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದರು.

ದೂರಿನ ಮೇರೆಗೆ ಆತನ ಮೊಬೈಲ್ ಲೊಕೇಶನ್ ಪತ್ತೆಹಚ್ಚಿದ ಪೊಲೀಸರು ಆತನ ಮೊಬೈಲ್ ಸುಳಿವು ಸಿಕ್ಕ ಜಾಗಕ್ಕೆ ತೆರಳಿದ್ದಾರೆ. ಆತನ ಮೊಬೈಲ್ ಕೆರೆಯೊಂದರ ದಡದಲ್ಲಿ ದೊರೆತಿದ್ದು ಅನುಮಾನದ ಮೇರೆಗೆ ಕೆರೆಯನ್ನು ಶೋಧಿಸಿದಾಗ ಆತನ ಶವ ಕೆರೆಯಲ್ಲಿ ಪತ್ತೆಯಾಗಿದೆ. ನಂತರದಲ್ಲಿ ಕೆರೆಯಿಂದ ಶವವನ್ನು ಮೇಲಕ್ಕೆತ್ತಲಾಗಿದೆ. 

ಮೃತ ಮಧು ಸ್ನೇಹಿತರು ಆತ್ಮೀಯರು ಕುಟುಂಬ ವರ್ಗದವರು ಆತನ ಸಾವಿನ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.