ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಹಿಂದೂ ಅವರ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಶಿವಮೊಗ್ಗದ ನಡುರಸ್ತೆಯಲ್ಲಿ ಬರ್ಬರವಾಗಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸೀಗೆಹಟ್ಟಿ ಹರ್ಷ ನ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಘಟನೆಯ ಕುರಿತಾಗಿ ಸಂತಾಪ ವ್ಯಕ್ತಪಡಿಸಿದರು, ಹರ್ಷನ ಕುಟುಂಬದ ಜೊತೆಗೆ ನಾವಿದ್ದೇವೆ ಇಡೀ ಸರ್ಕಾರವಿದೆ. ಹರ್ಷ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ ಧರ್ಮದ ರಕ್ಷಣೆಯ ಸಲುವಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾನೆ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾನೆ ಅಂತಹ ಉತ್ತಮ ವ್ಯಕ್ತಿಯನ್ನು ಕೊಲೆಗೈದಿರುವ ದುರುಳರನ್ನು ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕ್ಕೆ ಒಳಪಡಿಸಲಾಗುವುದು ಎಂದರು. 


ಹರ್ಷನ ತಾಯಿ ಹಾಗೂ ಸಹೋದರಿಯರಿಗೆ ಧೈರ್ಯ ತುಂಬಿದ ಅವರು ಸದಾ ನಿಮ್ಮ ಕುಟುಂಬದ ಆಗುಹೋಗುಗಳ ಜೊತೆಗೆ ನಾವಿದ್ದೇವೆ, ಏನಿದ್ದರೂ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಧೈರ್ಯ ತುಂಬಿದರು. ಹಾಗೂ ಧನ ಸಹಾಯವನ್ನು ಮಾಡಿದರು.

ಹರ್ಷನ ಹತ್ಯೆಯ ಕುರಿತು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶವೇ ಪ್ರತಿಭಟಿಸಿ ಆಕ್ರೋಶ ಹೊರಹಾಕಿತ್ತು. ಹತ್ಯೆಗೈದವರನ್ನು ಗಲ್ಲಿಗೇರಿಸಿ, ಎನ್ಕೌಂಟರ್ ಮಾಡಿ ಎಂಬ ಕೂಗುಗಳು ಎಲ್ಲೆಡೆ ಹಬ್ಬಿತ್ತು. ಪ್ರಸ್ತುತ ಪೊಲೀಸರು ಈ ಸಂಬಂಧ ತನಿಖೆ ನಡೆಸಲು ಅಧಿಕಾರಿಗಳ ತಂಡವನ್ನು ರಚಿಸಿ ಈಗಾಗಲೇ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ತನಿಖೆ ಮುಂದುವರೆದಿದ್ದು ಸಂಪೂರ್ಣ ತನಿಖೆಯ ನಂತರ ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. 

ಹರ್ಷನನ್ನು ಹತ್ಯೆಗೈದ ಆರೋಪಿಗಳ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಜರುಗಿಸಬೇಕೆಂದು ಕುಟುಂಬಸ್ಥರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರ ಜೊತೆಗೆ ಇನ್ನಿತರ ಮುಖಂಡರು ಹಾಜರಿದ್ದರು.