ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಾದ್ಯಂತ ನಡೆಯುತ್ತಿರುವ ಮುಸಲ್ಮಾನರೊಂದಿಗಿನ ವ್ಯಾಪಾರ-ವಹಿವಾಟು ನಿಷೇಧದ ಕುರಿತು ಅನೇಕ ಕಡೆಗಳಲ್ಲಿ ವಿವಾದ ಭುಗಿಲೆದ್ದಿದ್ದು ರಾಜ್ಯದ ಅನೇಕ ದೇವಾಲಯಗಳ ಜಾತ್ರಾ ಮಹೋತ್ಸವದಲ್ಲಿ ಮುಸಲ್ಮಾನರ ಅಂಗಡಿಗಳಿಗೆ ನಿಷೇಧ ಹೇರುವಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ರಾಜ್ಯಾದ್ಯಂತ ಹಲಾಲ್ ಮಾಡಿರುವ ಮಾಂಸವನ್ನು ಉಪಯೋಗಿಸಬಾರದು ಎಂಬ ಅಭಿಯಾನ ಆರಂಭವಾಗಿದೆ.
ಇದನ್ನೂ ಓದಿ : ಶೃಂಗೇರಿ : ಹೆದ್ದಾರಿ ಅಗಲೀಕರಣ ಸಂಬಂಧ ದೇವಸ್ಥಾನ ತೆರವುಗೊಳಿಸದಂತೆ ಸ್ಥಳೀಯರ ಮನವಿ
ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರಿನ ಶಾಸಕರಾದ ಸಿಟಿ ರವಿ ಅವರು ಇದೊಂದು ಆರ್ಥಿಕತೆಯ ಜಿಹಾದ್ ಆಗಿದೆ ಅವರ ಸಂಪ್ರದಾಯದಂತೆ ಅವರ ದೇವರಿಗೆ ಪ್ರಿಯವಾಗಿರುವ ಮಾಂಸವನ್ನು ನಮ್ಮ ದೇವರಿಗೆ ಎಂಜಲು ಮಾಡುವುದು ಸರಿಯಲ್ಲ ಅದು ನಮ್ಮ ಪದ್ಧತಿಯು ಅಲ್ಲ ಈ ಕುರಿತು ಜನ ಜಾಗೃತರಾಗಬೇಕು ಹಿಂದೂ ಸಂಘಟನೆಗಳ ನಿರ್ಣಯ ಸೂಕ್ತವಾದದ್ದಾಗಿದೆ ಎಂದರು.
ಕೇವಲ ಮುಸ್ಲಿಮರ ಧಾರ್ಮಿಕತೆಗೆ ಸೂಕ್ತವಾಗುವ ಎಲ್ಲವನ್ನು ಪ್ರತಿಯೊಬ್ಬರೂ ಒಪ್ಪಲೇಬೇಕೆಂಬ ಯಾವುದೇ ನಿಯಮಗಳಿಲ್ಲ. ಹಲಾಲ್ ಮಾಂಸವನ್ನು ಬಹಿಷ್ಕಾರ ಮಾಡುವ ಅಧಿಕಾರ ಹಾಗೂ ಸ್ವಾತಂತ್ರ್ಯ ನಮಗಿದೆ. ಕೇವಲ ಒಂದೇ ಬದಿಯಿಂದ ಸಾಮರಸ್ಯವಿದ್ದರೆ ಸಾಲದು ಎರಡು ಕಡೆಗಳಿಂದ ಪರಸ್ಪರವಾಗಿ ದೊರೆಯಬೇಕು.
ಬೇರೆಯವರ ಬಳಿ ಮುಸಲ್ಮಾನರು ವ್ಯವಹಾರ ನಡೆಸದಂತೆ ಕೇವಲ ಹಲಾಲ್ ಉತ್ಪನ್ನಗಳನ್ನೇ ಬಳಸಬೇಕೆಂಬ ಮಾತನ್ನು ಎಲ್ಲೆಡೆ ಸಾರುತ್ತ ಆರ್ಥಿಕವಾಗಿ ಜಿಹಾದ್ ನಡೆಸುತ್ತಿದ್ದಾರೆ. ಹಿಂದೂಗಳ ಜೊತೆಗೆ ವ್ಯಾಪಾರ-ವಹಿವಾಟು ನಿಲ್ಲಿಸುವ ಸಲುವಾಗಿ ಆರ್ಥಿಕ ಜಿಹಾದ್ ಹೇರಿದ್ದಾರೆ. ಅವರಿಗೆ ಯಾವ ರೀತಿಯಾಗಿ ಹಲಾಲ್ ಉತ್ಪನ್ನಗಳನ್ನು ಬಳಸಬೇಕೆಂದು ಅನಿಸುತ್ತದೆಯೋ ಅದೇ ರೀತಿ ನಮಗೂ ಕೂಡ ಅದನ್ನು ಬಳಸಬಾರದೆಂದು ಅನಿಸುತ್ತದೆ ಇದು ಅವರವರ ವೈಯಕ್ತಿಕ ಸ್ವತಂತ್ರ್ಯವಾಗಿದ್ದು ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಅವರ ದೇವರಿಗೆ ಅರ್ಪಣೆ ಮಾಡಿ ನಮ್ಮ ದೇವರಿಗೆ ಎಂಜಲನ್ನು ಸಮರ್ಪಿಸುವುದು ಕ್ರಮವಲ್ಲ. ಯಾವುದೇ ಮುಸಲ್ಮಾನರು ಮಟನ್ ಅಥವಾ ಚಿಕನ್ ಮಾಂಸವನ್ನು ಹಿಂದೂಗಳ ಅಂಗಡಿಗಳಲ್ಲಿ ಕೊಂಡುಕೊಂಡು ವ್ಯವಹರಿಸುವುದಿಲ್ಲ. ಅಂತೆಯೇ ಹಿಂದೂಗಳು ಕೂಡ ಅವರ ವೈಯಕ್ತಿಕ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲಾಲ್ ಮಾಂಸವನ್ನೇ ಬಳಸಿ ಎಂದು ಹೇಳಲು ಅವರಿಗೆ ಯಾವ ರೀತಿಯಾದ ಅಧಿಕಾರವಿದೆಯೋ ಅಂತೆಯೇ ಅದನ್ನು ಉಪಯೋಗಿಸದೇ ಇರಲು ನಮಗೂ ಅಧಿಕಾರವಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಹಿಜಾಬ್ ನಿಂದ ಆರಂಭವಾದ ಧರ್ಮ ಸಂಘರ್ಷ ಇದ್ದವು ಒಂದಿಲ್ಲೊಂದು ರೂಪ ಪಡೆದುಕೊಂಡು ಈ ಹಂತಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಈ ಬಹಿಷ್ಕಾರವು ಯಾವ ಹಂತಕ್ಕೆ ತಲುಪುವುದೋ ಎಂದು ಕಾದುನೋಡಬೇಕಿದೆ.






0 Comments