ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಬಹುಮುಖ್ಯ ಸಮಸ್ಯೆಯಾದ 94ಸಿ 94ಸಿಸಿ ಸಮಸ್ಯೆಗಳಿಗೆ ಹಾಗೂ ಮಲೆನಾಡಿಗರಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾದ್ಯಂತ ಜನಾಗ್ರಹ ಸಭೆ ಆಯೋಜಿಸಿರುವುದಾಗಿ ಕರ್ನಾಟಕ ಜನಶಕ್ತಿ ತಿಳಿಸಿದೆ.
ಇದನ್ನೂ ಓದಿ : ಅನ್ಯಮತೀಯರಿಗೆ ದೇವಸ್ಥಾನದ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಒತ್ತಾಯ.
ಮಲೆನಾಡಿನ ಅನೇಕ ಕುಟುಂಬಗಳು ನಿರಾಶ್ರಿತರಾಗಿದ್ದು ಈ ಕುಟುಂಬಗಳಿಗೆ ಸಮರ್ಪಕವಾದ ರೀತಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮಲೆನಾಡಿನ ಅಭಿವೃದ್ಧಿಗೆ ಮಾರಕವಾಗಿರುವ ಅರಣ್ಯ ಇಲಾಖೆಯ ದೌರ್ಜನ್ಯವನ್ನು ತಡೆಹಿಡಿಯಬೇಕೆಂದು ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಜನರಿಗೆ ಸೂಕ್ತ ಕಾನೂನಿನ ಅರಿವನ್ನು ನೀಡದೆ ಅನೇಕರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ವಸತಿಯಿರುವ ಜನರನ್ನು ಅಕ್ರಮವಾಗಿ ಒಕ್ಕಲೆಬ್ಬಿಸುತ್ತಿದ್ದಾರೆ, 2008 ರಲ್ಲಿ ಫಾರಂ ನಂಬರ್ 53 ಅಡಿಯಲ್ಲಿ ಸಾಗುವಳಿ ಚೀಟಿ ನೀಡಿದ ಅಧಿಕಾರಿಗಳೇ ಈಗ ಮಂಜೂರುಪಡಿಸಿಕೊಂಡ ಫಲಾನುಭವಿಗಳ ಮೇಲೆ ಭೂ ಕಬಳಿಕೆ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಅನಗತ್ಯವಾಗಿ ರೈತರ ಮೇಲೆ ಬಡವರ ಮೇಲೆ ದೌರ್ಜನ್ಯ ನಡೆಸುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಅರ್ಹ ಫಲಾನುಭವಿಗಳಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರಗಳ ವಿತರಣೆ ಮಾಡಬೇಕು ಶೃಂಗೇರಿ ಸುತ್ತಮುತ್ತಲಿನ ಅನೇಕರು ಬಾಡಿಗೆ ಮನೆಯಲ್ಲಿ ಹುಟ್ಟಿ ಬಾಡಿಗೆ ಮನೆಯಲ್ಲೇ ಸಾಯುತ್ತಿದ್ದಾರೆ. ಇಂತಹ ಅನೇಕರಿಗೆ ಆಶ್ರಯ ಕಲ್ಪಿಸಬೇಕು ಅದಲ್ಲದೇ ಕೇವಲ ತನಿಖೆಯ ಹೆಸರಿನಲ್ಲಿ ಸಮಯ ವ್ಯರ್ಥ ಮಾಡಬಾರದು ಎಂದರು.
ಶೃಂಗೇರಿಯಿಂದ ಕೆರೆಕಟ್ಟೆ ಮಾರ್ಗವಾಗಿ ಸಾಗುವಾಗ ಶಿಥಿಲಾವಸ್ಥೆ ಹೊಂದಿರುವ ಎರಡು ಸೇತುವೆಗಳಿವೆ, ಮೊದಲು ಈ ಸೇತುವೆಗಳನ್ನು ಹೊಸದಾಗಿ ನಿರ್ಮಾಣ ಮಾಡಿ ಅಥವಾ ದುರಸ್ತಿ ಮಾಡಿ ನಂತರದಲ್ಲಿ ಶೃಂಗೇರಿಯ ಮುಖಾಂತರ ಹಾದು ಹೋಗುವ ಡಬಲ್ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ದೊರೆಯಬೇಕಾದ ಕಾರಣ ಜನಶಕ್ತಿ ಸಂಘ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶೃಂಗೇರಿಯಲ್ಲಿ ದಿನಾಂಕ 24 ರಂದು ಬೈಕ್ ಜಾಥಾ ಉದ್ಘಾಟನೆ ನಡೆಸಲಿದೆ ಈ ಜಾಥಾ 24 ಹಾಗೂ 25 ರಂದು ಹಳ್ಳಿಗಳಲ್ಲಿ ಸಂಚಾರ ಮಾಡಲಿದ್ದು ಅಲ್ಲಿ ಈ ಕುರಿತು ಪ್ರಚಾರ ಮಾಡಲಿದೆ ಹಾಗೂ 28 ರಂದು ಕೊಪ್ಪ ತಾಲೂಕು ಕಚೇರಿ ಮುಂಭಾಗದಲ್ಲಿ ಜನಾಗ್ರಹ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.





0 Comments