ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಿಜಾಬ್ ವಿವಾದದ ನಂತರದಲ್ಲಿ ಆರಂಭವಾಗಿರುವ ಧರ್ಮ ಯುದ್ಧ ಇದೀಗ ಮುಂದಿನ ಹಂತವನ್ನು ತಲುಪಿದೆ. ಹಿಜಾಬ್ ಕುರಿತಾಗಿ ಹೈಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ರಾಜ್ಯಾದ್ಯಂತ ಮುಸಲ್ಮಾನರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ತಮಗೆ ನ್ಯಾಯ ದೊರೆತಿಲ್ಲ ಎಂಬ ಆಕ್ರೋಶವನ್ನು ಹೊರಹಾಕಿದ್ದರು.
ಇದನ್ನೂ ಓದಿ : ಏನಿದು ಬಡಾಮಕಾನ್ v/s ಮಠದ ಮನೆ ನಲ್ಲೂರು ಜಾಗದ ವಿವಾದ, ಕೋಮುಸೂಕ್ಷ್ಮ ವಿವಾದವಾಗಿ ಮಾರ್ಪಟ್ಟ ಜಾಗದ ಸಮಸ್ಯೆ
ನಂತರದಲ್ಲಿ ಇಡೀ ರಾಜ್ಯಾದ್ಯಂತ ಆರಂಭವಾದ ಧರ್ಮಯುದ್ದ ಕೇವಲ ಹಿಂದೂಗಳ ಅಂಗಡಿಯಲ್ಲಿ ಮಾತ್ರ ವ್ಯಾಪಾರ ವಹಿವಾಟು ನಡೆಸುವ ಅಭಿಯಾನವನ್ನು ಆರಂಭಿಸಿ ಜಾತ್ರೆಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಬೇಕು ಅನ್ಯಧರ್ಮೀಯರಿಗೆ ಯಾವುದೇ ಕಾರಣಕ್ಕೂ ಅಂಗಡಿ ಹಾಕಲು ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಿದ್ದರು.

ಅದರ ಮುಂದಿನ ಭಾಗವಾಗಿ ಈಗ ಹಲಾಲ್ ಮಾಂಸವನ್ನು ಹಿಂದೂಗಳು ಬಳಸಬಾರದು ಎಂಬ ಅಭಿಯಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರಂಭವಾಗಿದೆ. ಚಿಕ್ಕಮಗಳೂರಿನ ಶ್ರೀ ರಾಮ ದೇವಸ್ಥಾನದಿಂದ ವಿಜಯಪುರ ಮುಖ್ಯ ರಸ್ತೆಯಲ್ಲಿ ಇಂದು ಹಲಾಲ್ ಬ್ಯಾನ್ ಅಭಿಯಾನ ಆರಂಭಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪಟ್ಟಣದ ಅಂಗಡಿಗಳಿಗೆ ಕರಪತ್ರ ನೀಡಿ ಹಲಾಲ್ ಮಾಡಿದ ಮಾಂಸವನ್ನು ಖರೀದಿಸಬಾರದು, ಕೇವಲ ಹಿಂದುಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕೆಂದು ವರ್ತಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಯುಗಾದಿ ಹಬ್ಬದ ಸಂದರ್ಭದಲ್ಲಿ ಕೇವಲ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ದಿನಸಿ ವ್ಯಾಪಾರ ನಡೆಸಬೇಕು. ಹೊಸತೊಡಕುವಿನ ದಿನವಾದ ಯುಗಾದಿಯ ಮಾರನೇ ದಿನ ಕೇವಲ ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕು ಹಲಾಲ್ ಮಾಂಸವನ್ನು ಖರೀದಿ ಮಾಡಬಾರದು ಎಂದು ಮನವಿ ಮಾಡಿದರು.
ಮುಸ್ಲಿಮರು ಮಾಡುವ ಹಲಾಲ್ ಪದ್ಧತಿ ಅವೈಜ್ಞಾನಿಕವಾಗಿದ್ದು ಹಿಂದೂಗಳು ನಡೆಸುವ ಜಟ್ಕಾ ಕಟ್ ವಿಧಾನದ ಮಾಂಸವನ್ನು ಖರೀದಿ ಮಾಡೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ನಗರ ಅಧ್ಯಕ್ಷರು ಆಟೋ ಶಿವಣ್ಣ, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ ಗುರುಕಿರಣ್ ಬಜರಂಗದಳ ನಗರ ಸಂಯೋಜಕ ಶ್ಯಾಮ್ ವಿ ಗೌಡ, ಸಹ ಸಂಯೋಜಕ ಸುನಿಲ್ ವಿಖ್ಯಾತ ತುಡಕೂರು ಮಂಜು, ನಗರ ಸುರಕ್ಷಾ ಪ್ರಮುಖ ಪ್ರಸಾದ್ ಹಾಗೂ ಕಾರ್ಯಕರ್ತರು ಇದ್ದರು
ತನು ಕೊಟ್ಟಿಗೆಹಾರ, ವರದಿಗಾರರು



0 Comments