ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಎಲ್ಲರೂ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಆಲೋಚನೆಗಳನ್ನು ಮಾಡುತ್ತಿದ್ದರೆ ಇಲ್ಲೋರ್ವ ವೃದ್ಧ ತಾನೇ ಅರಣ್ಯಕ್ಕೆ ಬೆಂಕಿ ಹಚ್ಚುವಾಗ ಸೆರೆ ಸಿಕ್ಕಿದ್ದಾನೆ. 

ಇದನ್ನೂ ಓದಿ : ನಾಳೆಯಿಂದ ಆಗುಂಬೆ ಘಾಟಿ ಬಂದ್ : ಬದಲಿ ಮಾರ್ಗದಲ್ಲಿ ಚಲಿಸುವಂತೆ ಸೂಚನೆ

ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಗ್ರಾಮದ ವ್ಯಕ್ತಿ ಬಸವೇಗೌಡ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾನೆ ಈ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಆತನನ್ನು ಗಮನಿಸಿ ಯಾಕಾಗಿ ಅರಣ್ಯಕ್ಕೆ ಬೆಂಕಿ ಹಚುತ್ತಿದ್ದೀಯ ಎಂದು ಪ್ರಶ್ನಿಸಿದಾಗ ಆತನು ನೀಡಿದ ಉತ್ತರ ಹೀಗಿತ್ತು.

ಬೇರೆ ಯಾರಾದರೂ ಬೆಂಕಿ ಕೊಟ್ಟರೆ ಆ ಬೆಂಕಿ ನನ್ನ ಜಮೀನನ್ನು ಸುಡುವ ಸಂಭವವಿದೆ ಆದ ಕಾರಣ ನಾನೇ ಬೆಂಕಿ ಹಾಕಿ ಅದನ್ನು ತಡೆದಿದ್ದೇನೆ ಎಂದು ಬೇಜವಾಬ್ದಾರಿಯುತವಾಗಿ ಉತ್ತರಿಸಿದ್ದಾನೆ. ಈ ಘಟನೆಯನ್ನು ಅತ್ಯಂತ ಕಠಿಣವಾಗಿ ತೆಗೆದುಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆ ವೃದ್ಧನಿಗೆ ದೊಡ್ಡ ಮೊತ್ತದ ದಂಡ ಹಾಕಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈಗಾಗಲೇ ಬಿಸಿಲಿನ ತೀವ್ರತೆಗೆ ಅನೇಕ ಕಡೆಗಳಲ್ಲಿ ಅಗ್ನಿ ಅವಘಡ ಉಂಟಾಗುತ್ತಿದ್ದು ಬೇಕು ಬೇಕೆಂದೇ ಅನೇಕ ಎಕರೆ ಅರಣ್ಯ ಪ್ರದೇಶವನ್ನು ನಾಶ ಮಾಡಿದ ವ್ಯಕ್ತಿಯ ನಡೆಗೆ ಜನರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮರ ಗಿಡಗಳ ಜೊತೆಗೆ ಅದರಲ್ಲಿ ವಾಸವಾಗಿರುವ ಪಕ್ಷಿಗಳು ಅರಣ್ಯದ ಆಶ್ರಯ ಪಡೆದಿರುವ ಪ್ರಾಣಿಗಳೂ ಕೂಡ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ. ಈ ಅವಘಡದಿಂದ ಅನೇಕ ಎಕರೆ ಅರಣ್ಯ ಪ್ರದೇಶ ಸಂಪೂರ್ಣವಾಗಿ ಭಸ್ಮವಾಗಿದೆ. ಅಧಿಕಾರಿಗಳು ಎಷ್ಟೇ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರು ಕೂಡ ಈ ಕುರಿತು ಗಮನಹರಿಸದೆ ಕೇವಲ ವೈಯಕ್ತಿಕ ಸ್ವಾರ್ಥಕ್ಕೆ ಅರಣ್ಯಕ್ಕೆ ಬೆಂಕಿ ಕೊಡುವುದು ಎಷ್ಟು ಸರಿ. ಈ ರೀತಿಯ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲಾಖೆಯನ್ನು ಪರಿಸರ ಪ್ರೇಮಿಗಳು ಕೋರಿದ್ದಾರೆ.