ಕಾರ್ಕಳ/ಮಲೆನಾಡು: (ನ್ಯೂಸ್ ಮಲ್ನಾಡ್ ವರದಿ) ಭಾಷೆ, ಕಲೆ, ಸಂಸ್ಕೃತಿಗಳ ಸಮಾಗಮದ ಕಾರ್ಕಳ ಉತ್ಸವ ಮಾರ್ಚ್ 20ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಾಯಗೊಂಡರೆ, ವಿದ್ಯುತ್ ದೀಪಾಲಂಕಾರ, ವಸ್ತು ಪ್ರದರ್ಶನ, ಆಹಾರೋತ್ಸವ, ಬೋಟಿಂಗ್ ಇವುಗಳನ್ನು ಇಂದಿನ (ಮಾ.22ರ) ತನಕ ವಿಸ್ತರಿಸಲಾಗಿದ್ದು, ಇಂದು ಕಾರ್ಕಳ ಉತ್ಸವ ಮುಕ್ತಾಯ ಸಂಪನ್ನಗೊಳ್ಳಲಿದೆ. ಕಾರ್ಕಳ ಉತ್ಸವಕ್ಕೆ ಕೇವಲ ಕರಾವಳಿ ಭಾಗದ ಜನರಷ್ಟೇ ಅಲ್ಲದೆ ಮಲೆನಾಡಿನ ಮಂದಿಯೂ ಫಿದಾ ಆಗಿದ್ದಾರೆ.
ಉತ್ಸವ ಆರಂಭದ ದಿನಗಳಿಂದ ಮುಕ್ತಾಯಗೊಳ್ಳುವ ಮಾ.20ರ ತನಕವೂ ಪ್ರತಿನಿತ್ಯ ಸಹಸ್ರಾರು ಮಂದಿ ಭೇಟಿ ನೀಡುತ್ತಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದುದರಿಂದ ಜನರ ಉತ್ಸಾಹ ಹೆಚ್ಚಿದ ಕಾರಣಕ್ಕೆ ಸಾರ್ವಜನಿಕರ ಒತ್ತಾಯದಂತೆ ಸಾಂಸ್ಕೃತಿಕ ಉತ್ಸವ ಹೊರತು ಪಡಿಸಿ ಉಳಿದೆಲ್ಲವನ್ನು ಮುಂದುವರಿಸಲಾಗಿತ್ತು. ಈ ಹತ್ತು ದಿನಗಳಲ್ಲಿ ಉತ್ಸವಕ್ಕೆ ಬರಲಾಗದೆ ಉಳಿದವರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದಲೂ ಮುಂದುವರೆಸಲಾಗಿತ್ತು. ಸೋಮವಾರ ಕೂಡ ವಸ್ತು ಪ್ರದರ್ಶನ, ಬೋಟಿಂಗ್ ಸ್ಥಳ, ಆಹಾರೋತ್ಸವ ಮಳಿಗೆಗಳಲ್ಲಿ ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಕಂಡು ಬಂದರು. ಕಾರ್ಕಳ ಉತ್ಸವ ಕೇವಲ ಕರಾವಳಿ ಭಾಗದವರಿಗಷ್ಟೇ ಅಲ್ಲದೇ ಕಾರ್ಕಳ ಉತ್ಸವ ನೋಡಲು ಶೃಂಗೇರಿ, ಕೊಪ್ಪ ಸೇರಿದಂತೆ ಮಲೆನಾಡಿದ ಮಂದಿಯೂ ಭಾಗಿಯಾಗಿದ್ದಾರೆ. ಕೇವಲ ಹಾಡುಗಾರಿಕೆಗಷ್ಟೇ ಸೀಮಿತವಾಗದೆ ನೃತ್ಯ, ದೀಪಾಲಂಕಾರ, ವಸ್ತು ಪ್ರದರ್ಶನ, ಆಹಾರೋತ್ಸವ, ಹೆಲಿಕಾಪ್ಟರ್ ವಿಹಾರ, ಬೋಟಿಂಗ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಗಮನ ಸೆಳೆದಿದ್ದಲ್ಲದೆ, ಕಾರ್ಕಳ ಉತ್ಸವ ಅಯೋಜನೆ ಕುರಿತಂತೆ ಹಾಗೂ ಸ್ಥಳೀಯ ಶಾಸಕರಾದ ಸುನಿಲ್ ಕುಮಾರ್ ಅವರಿಗೂ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ನಾವು ಮೂಲತಃ ದಕ್ಷಿಣ ಕನ್ನಡದವರಾಗಿದ್ದು ಈ ಹಬ್ಬದ ವಾತಾವರಣ ನಮ್ಮನ್ನು ಮತ್ತೆ ಇಲ್ಲಿಗೆ ಬರುವಂತೆ ಮಾಡಿತು. ನಮ್ಮ ಜೊತೆಗೆ ನಮ್ಮ ಊರಿನ ಹಲವರು ಸಹ ಕಾರ್ಯಕ್ರಮಕ್ಕೆ ಬಂದಿದ್ದಾರೆ.ಸರ್ಕಾರದ ಅನುದಾನಿತ ಕಾರ್ಯಕ್ರಮ ಎಂದರೆ ಅದರಿಂದ ಹಣ ಹೊಡೆಯುವುದನ್ನೇ ನೋಡುವ ಈ ಕಾಲದಲ್ಲಿ ಕಾರ್ಕಳ ಉತ್ಸವದ ಅಚ್ಚುಕಟ್ಟಾದ, ಅದ್ಧೂರಿ ಆಯೋಜನೆಯನ್ನು ಊರ ಹಬ್ಬದಂತೆ ಸಾರ್ವಜನಿಕವಾಗಿ ಆಯೋಜನೆ ಮಾಡಿರುವುದು ನೋಡಿ ಖುಷಿಯಾಯಿತು. ನಮ್ಮ ಊರುಗಳಲ್ಲಿ ಸಹ ಇಂತಹ ಉತ್ಸವ ಮಾಡುವಂತಾಗಲಿ -ಸುರೇಶ್, ಸ್ಥಳೀಯರು ಕೊಪ್ಪ
ಫಲಪುಷ್ಪ, ಕೃಷಿ ಪ್ರದರ್ಶನ ಇಂದು ಕೊನೆ ಸ್ವರಾಜ್ ಮೈದಾನದ ಬಳಿ ವಿಶೇಷವಾಗಿ ಪುಷ್ಪ ಪ್ರದರ್ಶನ, ಕೃಷಿ ವಸ್ತು ಪ್ರದರ್ಶನಕ್ಕೆ ನೂರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರದರ್ಶನ ಮಾ. 22 (ಇಂದು) ಕೊನೆಯ ದಿನವಾಗಿದೆ. ಮಾ. 20ರಂದು ರಾತ್ರಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ, ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಕರುನಾಡ ವೈಭವ ಕಾರ್ಯಕ್ರಮ ನಡೆಯುವುದರೊಂದಿಗೆ ಕಾರ್ಕಳ ಉತ್ಸವ 2022ರ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಾಯ ಕಂಡವು.






0 Comments