ರಾಜ್ಯ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ನಿಷೇಧ ಹೇರಲಾಗುತ್ತದೆ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿತ್ತು. ಈ ಕುರಿತಾಗಿ ಮಲೆನಾಡು ಸೇರಿದಂತೆ ರಾಜ್ಯದ ಅನೇಕ ಭಾಗಗಳ ರೈತರು ಅಡಿಕೆಯನ್ನು ನಿಷೇಧ ಮಾಡದೆ ಇರುವಂತೆ ಸರ್ಕಾರವನ್ನು ಹಾಗೂ ಅಧಿಕಾರಿಗಳನ್ನು ಕೋರಿದ್ದರು. ಅಂತೆಯೇ ಅಡಿಕೆ ಬೆಳಗಾರರಿಗೆ ಕಿಂಚಿತ್ತಿನ ಸಮಾಧಾನ ನೀಡುವ ಸುದ್ದಿಯನ್ನು ಗೃಹ ಸಚಿವ ಆರಗಜ್ಞಾನೇಂದ್ರ ನೀಡಿದ್ದಾರೆ.

ಈ ಕುರಿತು ಕೇಂದ್ರವನ್ನು ಒತ್ತಾಯಿಸಿರುವ ಅವರು ಅಡಿಕೆ ವಾಣಿಜ್ಯ ಬೆಳೆಯಾಗಿದ್ದು ಅನೇಕ ಕುಟುಂಬಗಳು ಅಡಿಕೆ ಕೃಷಿಗೆ ಅವಲಂಬಿತವಾಗಿದೆ ಆದ ಕಾರಣ ಬೆಳೆಗಾರರ ಮೇಲೆ ವಿಪರೀತವಾಗಿ ಪರಿಣಾಮ ಬೀರುವ ಯಾವುದೇ ನಿರ್ಣಯಗಳನ್ನು ಕೈಗೊಳ್ಳಬಾರದು ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಅಡಿಕೆ ಬೆಳೆಯು ರಾಜ್ಯದ ಪ್ರಮುಖ ಬೆಳೆಯಾಗಿದ್ದು ಈ ಬೆಳೆಯನ್ನು ಜೀವನದ ಆಶ್ರಯಕ್ಕಾಗಿ ನಂಬಿಕೊಂಡು ಬಂದಿರುವ ಅನೇಕ ಕುಟುಂಬಗಳು ರಾಜ್ಯಾದ್ಯಂತ ಇದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಡಿಕೆ ಬೆಳೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂದು ಸುಪ್ರೀಂಕೋರ್ಟ್ ಗೆ ಕಾಂಗ್ರೆಸ್ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು, ಈ ಅಫಿಡವಿಟ್ ನ್ನು ತೆರವು ಮಾಡುವ ಕುರಿತಾಗಿ ಸರ್ಕಾರ ಪ್ರಯತ್ನಿಸುತ್ತಿದ್ದು ಅಡಿಕೆ ನಿಷೇಧದ ಕುರಿತಾಗಿ ಯಾರು ಚರ್ಚಿಸಬಾರದು ಎಂದು ಗೃಹ ಸಚಿವ ಆರಗಜ್ಞಾನೇಂದ್ರ ಹೇಳಿದ್ದಾರೆ.



ಇದನ್ನೂ ಓದಿ : ಶೃಂಗೇರಿ; ಫೂಟ್ ಪಾಥ್ ಮೇಲೆ ವಾಹನಗಳು ಜಾಲಿ; ಪ್ರವಾಸಿಗರಿಂದ ರೂಲ್ಸ್ ಗೆ ಗೋಲಿ

ಅಡಿಕೆ ನಿಷೇಧದ ಕುರಿತು ಪ್ರಸ್ತಾಪ ಆರಂಭವಾಗುತ್ತಿದ್ದಂತೆ ಅನೇಕ ರೈತರು ಅಡಿಕೆ ಬೆಳಗಾರರು ಈ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಅಡಿಕೆ ನಿಷೇಧವಾದರೆ ತಮ್ಮ ಜೀವನವೇ ನಿರ್ನಾಮವಾಗುವ ಸ್ಥಿತಿಗೆ ತಲುಪುತ್ತದೆ ಎಂಬ ಅಳಲನ್ನು ತೋಡಿಕೊಂಡಿದ್ದರು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಗೃಹಸಚಿವ ಆರಗ ಜ್ಞಾನೇಂದ್ರ ಅಡಿಕೆ ಬೆಳೆಗಾರರು ನಿಶ್ಚಿಂತೆಯಿಂದ ಇರುವಂತೆ ಕೋರಿದ್ದಾರೆ.