ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಕಾರ್ ಒಂದನ್ನು ಕಳ್ಳರು ಕೈಚಳಕ ತೋರಿ ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಜಯಪುರ : 438 ಕೆ.ಜಿ ತೂಕದ ಕಾಫಿ ಬೀಜಗಳನ್ನು ಕಳ್ಳತನ ಮಾಡಿದ್ದ ಖದೀಮ ಅಂದರ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ಮಾರುತಿ 800 ಕಾರ್ ಅನ್ನು ಚಾಲಾಕಿ ಕಳ್ಳರು ಕದ್ದೊಯ್ದಿದ್ದಾರೆ. ಈ ಕಾರು ಕೊಟ್ಟಿಗೆಹಾರದಲ್ಲಿ ಹೋಟೆಲ್ ನಡೆಸುತ್ತಿದ್ದ ಸಿದ್ಧಿಕ್ ಎಂಬುವವರಿಗೆ ಸೇರಿದ್ದಾಗಿದೆ. ಯಾವಾಗಲೂ ಕಾರ್ ನಿಲ್ಲಿಸುವ ಸ್ಥಳದಲ್ಲಿಯೇ ಕಾರ್ ನಿಲ್ಲಿಸಿ ತೆರಳಿದ್ದ ಇವರು ಕಾರ್ಯದ ನಿಮಿತ್ತ ಮೂಡಿಗೆರೆಗೆ ತೆರಳಲು ಮನೆಯಿಂದ ಬಂದಾಗ ಕಾರ್ ಕಾಣೆಯಾಗಿರುವುದು ಪತ್ತೆಯಾಗಿದೆ. 

ಈ ಕುರಿತು ಸ್ಥಳಕ್ಕಾಗಮಿಸಿದ ಬಣಕಲ್ ಠಾಣಾ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಹಾಗೂ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಳೆದ ಕೆಲ ದಿನಗಳಿಂದ ಕೊಟ್ಟಿಗೆಹಾರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳ್ಳತನನಡೆಯುತ್ತಿದ್ದು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದಲ್ಲಿ ಈ ರೀತಿಯ ಪ್ರಕರಣಗಳು ನಿಯಂತ್ರಣಕ್ಕೆ ಬರಲಿದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು.