ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ಪಿಡಿಓ ಮೇಲೆ ಮಹಿಳೆಯೋರ್ವರು ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ನ ಅಭಿವೃದ್ದಿ ಅಧಿಕಾರಿಗಳ ಮೇಲೆ ಭಾರತಿ ಪಿ ಎಂಬುವವರು ದೂರು ನೀಡಿದ್ದಾರೆ. ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ 1 ಎಕರೆ 07 ಗುಂಟೆ ಭೂಮಿಯನ್ನು ಬಡಾವಣೆ ಮಾಡಿ ನಿವೇಶನವನ್ನು ಮಾರಾಟ ಮಾಡುವ ಸಲುವಾಗಿ ಭೂ ಪರಿವರ್ತನೆ ಮಾಡಿಸಲಾಗಿದ್ದು ಪ್ರಸ್ತುತ ಬಡಾವಣೆ ಹಾಗೂ ನಿವೇಶನ ಮಾಡುವ ಹಂತದಲ್ಲಿದ್ದು ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ಭೂ ಪರಿವರ್ತನೆ ನಂತರದ ಚಟುವಟಿಕೆಯನ್ನು ಕೈಗೊಂಡಿರುವುದಿಲ್ಲ, ಮೂಲಭೂತ ಸೌಕರ್ಯದ ಕುರಿತಾದ ಚಟುವಟಿಕೆಗಳು ಈ ಜಾಗದಲ್ಲಿ ನಡೆಯುತ್ತಿಲ್ಲ ಕೇವಲ ದಾಖಲಾತಿ ಹಾಗೂ ನೋಂದಣಿ ಕಾರ್ಯ ನಡೆದಿದೆ. ಕುಟುಂಬದವರ ನಿರ್ಧಾರದಂತೆ ಕೃಷಿ ಮತ್ತು ಕೃಷಿಯೇತರ ಸ್ವಂತ ಬಳಕೆಗಾಗಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಗೆ ಅರ್ಜಿ ನೀಡಿ ಅವರ ಆದೇಶಕ್ಕಾಗಿ ಕಾಯುತ್ತಿರುತ್ತೇವೆ ಆದರೆ ಈ ಸಂದರ್ಭದಲ್ಲಿ ವಿದ್ಯಾರಣ್ಯಪುರ ಪಿಡಿಓ ಜಾಗವನ್ನು ಮಣ್ಣು ತೆಗೆದು ಹಾಳು ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.

ಸಾರ್ವಜನಿಕರ ಆಸ್ತಿಯನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳು ಈ ರೀತಿಯ ಕೆಲಸ ಮಾಡಿರುವುದು ಸರಿಯಲ್ಲ, ನಮ್ಮ ಪೂರ್ವಜರಿಂದ ಬಂದ ಆಸ್ತಿಯನ್ನು ದಬ್ಬಾಳಿಕೆಯ ಮೂಲಕ ಹಾಳುಮಾಡಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ರಸ್ತೆ ಮಾಡಿ ಮಹಿಳೆಯ ಆಸ್ತಿ ಮೇಲೆ ದೌರ್ಜನ್ಯ ಮಾಡಿದ್ದಾರೆ. ಹಿಂದೆ ನಮ್ಮ ಜಾಗ ಹೇಗಿತ್ತೋ ಆ ಸ್ಥಿತಿಗೆ ಜಾಗವನ್ನು ಮರುಳಿಸಿ ಅಧಿಕಾರಿಗಳು ನ್ಯಾಯ ಒದಗಿಸಬೇಕು - ಭಾರತಿ.ಪಿ ಜಾಗವನ್ನು ಪರಿತ್ಯಜನ ಮಾಡಿದ ಮಹಿಳೆ 

ನಮ್ಮ ಜಮೀನಿಗೆ ವಿದ್ಯಾರಣ್ಯಪುರ ಪಿಡಿಓ, ಗ್ರಾಮ ಪಂಚಾಯತ್ ಸದಸ್ಯರು ಜೆಸಿಬಿ ಮೂಲಕ ರಸ್ತೆ ಮಾಡಿದ್ದಾರೆ, ನಮ್ಮ ಭೂಮಿಯನ್ನು ಮಣ್ಣು ತೆಗೆದುಹಾಳು ಮಾಡಿದ್ದಾರೆ. ಈ ಹಿಂದೆ ಅಲ್ಲಿ ಯಾವುದೇ ರಸ್ತೆಗಳು ಇರದ ಕಾರಣ ಹಾಳುಮಾಡಿದ ಜಮೀನನ್ನು ಹಳೆಯ ಸ್ಥಿತಿಗೆ ಮರುಳಿಸಿ ನೀಡುವಂತೆ ಹಾಗೂ ಈ ಕುರಿತು ಗ್ರಾಮ ಪಂಚಾಯತ್ ಪಿಡಿಓ, ಸದಸ್ಯರು ಹಾಗೂ ಸುತ್ತಮುತ್ತಲಿನ ಜಮೀನಿನವರ ವಿಚಾರಣೆ ನಡೆಸುವಂತೆ ಶೃಂಗೇರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮೇಲಧಿಕಾರಿಗಳು ದಿನಾಂಕ ನಿಗದಿಪಡಿಸಿ ಸಭೆಗೆ ಆಗಮಿಸಲು ಸೂಚಿಸಿದ್ದರು ಆದರೆ ಈ ಮಧ್ಯದಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯತ್ ಗೆ ಸಂಬಂಧಪಟ್ಟ ವ್ಯಕ್ತಿಗಳು ಜಾಗದ ಬೇಲಿಯನ್ನು ತೆರವು ಮಾಡಿ ಮಣ್ಣುಹಾಕಿ ರಸ್ತೆ ನಿರ್ಮಾಣ ಮಾಡಿದ್ದಾರೆ ಇದರಿಂದಾಗಿ ನಮ್ಮಜಾಗ ಹಾಳಾಗಿದೆ ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಭಾರತಿ ಅವರು ಕೋರಿದ್ದಾರೆ. 

ಸರ್ಕಾರದ ಸುಪರ್ದಿಗೆ ಈ ಜಾಗವನ್ನು ಬಿಟ್ಟುಕೊಟ್ಟಿರುವ ಕಾರಣ ನಾವು ರಸ್ತೆ ನಿರ್ಮಾಣ ಮಾಡಿದ್ದೇವೆ, ಜಾಗದ ರದ್ದತಿ ಕುರಿತು ಸರ್ಕಾರದಿಂದ ಆದೇಶ ಬಂದಲ್ಲಿ ತೆರವು ಮಾಡಿಸಿಕೊಡಲಾಗುವುದು ಅಲ್ಲಿಯವರೆಗೆ ಈ ಜಾಗ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ. - ಗೋಪಾಲ್ ಹಾಂಡ, ಪಿಡಿಓ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್