ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಇಂದು ಕೊಪ್ಪದ ಪಟ್ಟಣ ಪಂಚಾಯತ್ ನಲ್ಲಿ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಇದಿನಬ್ಬ ಇಸ್ಮಾಯಿಲ್ ಹಾಗೂ ಉಪಾಧ್ಯಕ್ಷರಾಗಿ ಗಾಯತ್ರಿ ವಸಂತ್ ಅವಿರೋಧವಾಗಿ ಆಯ್ಕೆಯಾದರು.
ಇದನ್ನೂ ಓದಿ : ಅಡುಗೆ ಎಣ್ಣೆ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಕೆ. ಎನ್ ರಮೇಶ್
ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಸದೃಢವಾಗಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಜನ ನಿಮ್ಮ ಹೆಗಲಿಗೇರಿಸಿದ್ದಾರೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ನೀವುಗಳು ಮಹತ್ತರವಾದ ಪಾತ್ರ ವಹಿಸಬೇಕು. ಜನಪರ ಆಡಳಿತ ನೀಡಬೇಕು ಎಂದರು ಹಾಗೂ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆಯ್ಕೆಗೊಂಡ ಇಬ್ಬರನ್ನೂ ಅಭಿನಂದಿಸಿದರು ಹಾಗೂ ಪಟ್ಟಣ ಪಂಚಾಯತ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಿಗೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ರಾಜ್ಯದ ಸಮರ್ಪಕ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ನ್ನು ರಾಜ್ಯದ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲಿನ ಒಕ್ಕೂಟ ರಚನೆ ಮಾಡಿರುವುದು ಹಾಗೂ ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟಗಳಿಗೆ ರೋಪ್ ವೇ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳು ಜಿಲ್ಲೆಗೆ ಈ ಬಜೆಟ್ ನಿಂದ ದೊರಕಿದೆ ಎಂದರು ಹಾಗೂ ನೂತನವಾಗಿ ಆಯ್ಕೆಗೊಂಡವರನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

0 Comments