ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ರೈತ ಮುಖಂಡರು ಒಗ್ಗೂಡಿ ಮಲೆನಾಡಿನ ರೈತರಿಗೆ ಕಾಯ್ದೆಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : ಏನಿದು ಬಡಾಮಕಾನ್ v/s ಮಠದ ಮನೆ ನಲ್ಲೂರು ಜಾಗದ ವಿವಾದ, ಕೋಮುಸೂಕ್ಷ್ಮ ವಿವಾದವಾಗಿ ಮಾರ್ಪಟ್ಟ ಜಾಗದ ಸಮಸ್ಯೆ
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ವಿಧಾನಸಭಾ ಕಛೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸುಧಾಕರ್ ಎಸ್ ಶೆಟ್ಟಿ ಹಾಗೂ ರೈತ ಮುಖಂಡರುಗಳು ಭದ್ರಾ ಹಿನ್ನೀರಿನಿಂದ ನಿರಾಶ್ರಿತರಾದ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ, ಹುಲಿ ಯೋಜನೆ, ಬಫರ್ ಜೋನ್, ಸೇರಿದಂತೆ ಮಲೆನಾಡಿನ ರೈತರಿಗೆ ಮಾರಕವಾಗಿರುವ ಇನ್ನಿತರ ಕಾಯ್ದೆಗಳ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.
ಮಲೆನಾಡು ಭಾಗವು ಸಂಪೂರ್ಣ ಅರಣ್ಯ ಪ್ರದೇಶವಾಗಿರುವುದರಿಂದ ಒಂದೆಡೆ ಅಭಿವೃದ್ಧಿಗೆ ಕಾಯ್ದೆಗಳು ಮಾರಕವಾಗಿದ್ದರೆ ಇನ್ನೊಂದೆಡೆ ಜನರಿಗೆ ಮಾನಸಿಕ ಕಿರುಕುಳ ಹಾಗೂ ಜೀವನವನ್ನು ಅಭದ್ರತೆಗೆ ಸಿಲುಕಿಸುತ್ತಿದೆ ಈ ಕುರಿತು ಅತೀ ಶೀಘ್ರವಾಗಿ ಸಮಸ್ಯೆಯ ಪರಿಹಾರವಾಗಬೇಕು ಎಂದು ಸುಧಾಕರ್ ಎಸ್ ಶೆಟ್ಟಿ ಅವರು ಕೋರಿದರು.
ಈ ಕುರಿತು ಮಾತನಾಡಿದ ರೈತ ಮುಖಂಡರಾದ ಮನೋಹರ ಸಿ.ಎಲ್ ಚಬ್ಬೆನಾಡು ಅವರು ಮಲೆನಾಡು ಈಗಾಗಲೇ ಹಲವಾರು ಕಾಯ್ದೆಗಳಿಂದ ಕಂಗೆಟ್ಟಿದೆ ಈ ಮಧ್ಯೆ ನಮ್ಮದೇ ಆದ ಜಮೀನಿನಲ್ಲಿ ವಾಸ ಮಾಡುವುದು ದುಸ್ತರವಾಗಿದೆ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನೀಡುತ್ತಿರುವ ಕಿರುಕುಳದಿಂದ ಮಲೆನಾಡಿನ ರೈತರು ಕಂಗ್ಗೆಟ್ಟಿದ್ದಾರೆ ವಿಶೇಷವಾಗಿ ಎನ್. ಆರ್ ಪುರದಲ್ಲಿ ಕಸ್ತೂರಿರಂಗನ್, ಬಫರ್ ಜೋನ್ ವರದಿಯನ್ನು ಯಥಾವತ್ತಾಗಿ ಜಾರಿಗೆತರಂದತೆ ಪುನರ್ ಪರಿಶೀಲನೆ ಮಾಡುವಂತೆ ಸರ್ಕಾರದ ಮೇಲೆ ಮಲೆನಾಡಿನ ಜನ ಸಮುದಾಯದ ಪರವಾಗಿ ಒತ್ತಡ ಹಾಕುವಂತೆ ಒತ್ತಾಯಿಸಿದರು.
ಎನ್.ಆರ್ ಪುರ ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷರಾದ ಚಂದ್ರಶೇಖರ್ ರವರು 94 ಸಿ ಎನ್ನುವುದು ಒಂದು ಗಗನ ಕುಸುಮವಾಗಿದೆ, 20 ವರ್ಷಗಳ ಹಿಂದೆ ಮನೆ ಕಟ್ಟಿದವರಿಗೂ ಸಹ ಇವತ್ತಿಗೂ ಹಕ್ಕುಪತ್ರ ಸಿಗದೇ ಒದ್ದಾಡುತ್ತಿರುವ ಪರಿಸ್ಥಿತಿಯನ್ನು ಮಾಜಿಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ವಿವರಿಸಿದರು.
ಈ ಸಮಸ್ಯೆಗಳನ್ನು ಮೌನವಾಗಿ ಆಲಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಯಾವುದೇ ಸರ್ಕಾರವು ರೈತರ ವಿರುದ್ಧವಾದ ನಿರ್ಣಯ ತೆಗೆದುಕೊಂಡಲ್ಲಿ ನಾವು ಅದನ್ನು ಸದಾ ಪ್ರತಿಭಟಿಸುತ್ತೇವೆ, ಈ ಕಾಯ್ದೆಗಳಿಂದ ರೈತರಿಗೆ ಉಂಟಾಗಿರುವ ಸಮಸ್ಯೆಯ ಕುರಿತು ಸರ್ಕಾರದೊಡನೆ ಮಾತುಕತೆ ನಡೆಸಿ ರೈತರೊಂದಿಗೆ ನೇರ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಈ ಕುರಿತು ನಾನು ತಿಳಿಸುವವರೆಗೂ ಯಾವುದೇ ಹೋರಾಟಕ್ಕೆ ಮುಂದಾಗಬಾರದು ಎಂದು ನೆರೆದವರಲ್ಲಿ ತಿಳಿಸಿದರು ಹಾಗೂ ಸಚಿವರೊಡನೆ ಮಾತನಾಡಿ ಈ ಸಮಸ್ಯೆಯನ್ನು ಪರಿಹಾರ ಮಾಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿನಯ್ ಕಣಿವೆ, ಶಿವದಾಸ್, ರಾಜ್ ಪುರೋಹಿತ್, ಶ್ರೀಕಾಂತ್ ಸಿ.ವೈ, ರಘು ಕೆ.ಟಿ, ಶ್ರೀನಾಥ ಎಂಟನೇ ಮೈಲಿಕಲ್ ಮುಂತಾದವರು ಹಾಜರಿದ್ದರು.

0 Comments