ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಹಾಗೂ ಅಖಿಲ ಭಾರತ ಶ್ರೀ ಬಬ್ಬುಸ್ವಾಮಿ ಮುಂಡಾಲ ಸಮಾಜದ ಜಿಲ್ಲಾಧ್ಯಕ್ಷರಾಗಿರುವ ವೈ.ಜಿ ಸುರೇಶ್ ಅವರ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ಅನಿಲ್ ನಾಯ್ಕ ಅವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತ ಬಬ್ಬು ಸ್ವಾಮಿ ಮುಂಡಾಲ ಸಮಾಜದವರು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್ ಅವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ : ಮೂಡಿಗೆರೆ : ಶಾಲೆ ಸೇರಿದಂತೆ ಮೂರು ಕಡೆಗಳಲ್ಲಿ ಕಳ್ಳತನ ಎಸಗಿ ಎಸ್ಕೇಪ್ ಆದ ಕಳ್ಳರು

ಪೊಲೀಸ್ ಅಧಿಕಾರಿ ಅನಿಲ್ ನಾಯ್ಕ ಅವರಲ್ಲಿ ಎನ್.ಸಿ.ಆರ್ ವಿಚಾರದ ಕುರಿತಾಗಿ ಮಾತನಾಡಲು ವೈ.ಜಿ ಸುರೇಶ್ ಅವರು ಠಾಣೆಗೆ ತೆರಳಿದಾಗ ಅವರಿಗೆ ಮಾತನಾಡಲು ಬಿಡದೇ ಅಮಾನುಷವಾಗಿ ಅವರ ತಲೆ, ಹಣೆ, ಎದೆ ಕಣ್ಣಿಗೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ, ಹಾಗೂ ಹಲ್ಲೆ ಮಾಡುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ನಾನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವನು, ನೀನು ಪರಿಶಿಷ್ಟ ಜಾತಿ ಎಂದು ಗೊತ್ತಿದೆ ನನ್ನ ಮೇಲೆ ನಿನಗೆ ಯಾವುದೇ ಪ್ರಕರಣಗಳನ್ನು ದಾಖಲು ಮಾಡಲು ಆಗುವುದಿಲ್ಲ ಎಂದು ಜಾತಿಯ ಕುರಿತಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಕೊಲೆ ಬೆದರಿಕೆ : 

ವೈ ಜಿ ಸುರೇಶ್ ಅವರಿಗೆ ಪೊಲೀಸ್ ಅಧಿಕಾರಿ ಅನಿಲ್ ನಾಯ್ಕ ಕೊಲೆ ಬೆದರಿಕೆ ಹಾಕಿದ್ದಾರೆ ಎಂದೂ ಬಬ್ಬುಸ್ವಾಮಿ ಸಮಾಜದವರು ಆರೋಪಿಸಿದ್ದಾರೆ. ನಿನ್ನ ಬಿಜೆಪಿ ರಾಜಕೀಯ ನನ್ನೊಂದಿಗೆ ನಡೆಯುವುದಿಲ್ಲ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದೀಯ ಎಂದು ನಿನ್ನನ್ನು ಒಳಗೆ ಹಾಕಿ ರೌಡಿ ಶೀಟರ್ ಅಡಿಯಲ್ಲಿ ಎನ್ಕೌಂಟರ್ ಮಾಡುತ್ತೇನೆ ಎಂದು ಅನಿಲ್ ನಾಯ್ಕ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಅಧಿಕಾರಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು ಕೂಡಲೇ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ಹಾಗೂ ಎಫ್.ಐ.ಆರ್ ದಾಖಲುಮಾಡಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕೆಂದು ಬಬ್ಬು ಸ್ವಾಮಿ ಸಮಾಜದ ಪದಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್ ಅವರನ್ನು ಕೋರಿದ್ದಾರೆ.

ಈ ಸಂದರ್ಭದಲ್ಲಿ ಅಖಿಲ ಭಾರತ ಶ್ರೀ ಬಬ್ಬುಸ್ವಾಮಿ ಮುಂಡಾಲ ಸಮಾಜದ ಪದಾಧಿಕಾರಿಗಳು, ಸಮಾಜ ಬಾಂಧವರು, ನಗರಸಭೆ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ಹಾಗೂ ನಗರಸಭಾ ಸದಸ್ಯ ಮಣಿಕಂಠ ಇನ್ನಿತರರು ಹಾಜರಿದ್ದರು.