ತರೀಕೆರೆ : (ನ್ಯೂಸ್ ಮಲ್ನಾಡ್ ವರದಿ) ಹೆದ್ದಾರಿ ಅಗಲೀಕರಣ ಮಾಡುವ ಸಂದರ್ಭದಲ್ಲಿ ಅಗಲೀಕರಣಕ್ಕೆ ಒಳಪಡುವ ಎಲ್ಲ ಜಮೀನುಗಳ ಕೃಷಿಕರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ರೈತರು ತಮ್ಮ ರಕ್ತದಿಂದ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳೆಯೂರು ಗಂಧದಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಬೈಪಾಸ್ ರಸ್ತೆಯ ನಿರ್ಮಾಣದ ಸಲುವಾಗಿ ಭೂಸ್ವಾಧೀನಕ್ಕೆ ಒಳಪಡುವ ಕುಟುಂಬಗಳ ರೈತರು ಒಂದು ತಿಂಗಳಿನಿಂದ ನಿರಂತರವಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಂತಿ ಸಾಕು ಕ್ರಾಂತಿ ಬೇಕು ಎಂಬ ವಾಕ್ಯದೊಂದಿಗೆ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಈ ಪ್ರತಿಭಟನೆ ನಿನ್ನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು ರೈತರು ಸಿರಿಂಜಿನಿಂದ ರಕ್ತವನ್ನು ತೆಗೆದು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ರೈತರು ಆಗ್ರಹಿಸುತ್ತಿರುವುದು ಕಳೆದುಕೊಳ್ಳುತ್ತಿರುವ ಶ್ರೀಗಂಧದ ಮರಗಳಿಗೆ ಸೂಕ್ತವಾದ ಪರಿಹಾರ ದೊರಕಿಸಬೇಕೆಂದು ಆದರೆ ಪರಿಹಾರ ಕಾರ್ಯಕ್ಕೆ ಯಾರೂ ಕೂಡ ಬೆಂಬಲವನ್ನು ಸೂಚಿಸುತ್ತಿಲ್ಲ. ರೈತರು ಕಳೆದುಕೊಳ್ಳುವ ಸ್ವತ್ತುಗಳಿಗೆ ಸಮರ್ಪಕವಾದ ಬೆಲೆ ನೀಡುತ್ತಿಲ್ಲ. ಈ ಕಾರಣಕ್ಕಾಗಿ ಪ್ರತಿಭಟನೆಯ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು ಎಷ್ಟೇ ತೀವ್ರ ಸ್ವರೂಪವನ್ನು ಪಡೆದುಕೊಂಡರು ಕೂಡ ಅಧಿಕಾರಿಗಳು ರಾಜಕಾರಣಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಸಮರ್ಪಕವಾದ ನ್ಯಾಯಯುತ ಪರಿಹಾರ ನೀಡಬೇಕೆಂದು ಭೂ ಸ್ವಾಧೀನ ಅಧಿಕಾರಿಗಳಿಗೆ ರಕ್ತದಲ್ಲಿ ಬರೆದ ಪತ್ರವನ್ನು ಸಲ್ಲಿಸಿ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದರು.
ಈ ಸಮಯದಲ್ಲಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಮಧುಸೂಧನ, ರಾಜೇಶ್ವರಿ, ಪಲ್ಲವಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.





0 Comments