ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಡುಗೆ ಎಣ್ಣೆಗೆ ಕೃತಕವಾಗಿ ಅಭಾವ ಸೃಷ್ಟಿಸಿ ಹೆಚ್ಚುಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಎಚ್ಚರಿಕೆ ನೀಡಿದರು. 

ಜಿಲ್ಲೆಯಲ್ಲಿ ಅಡುಗೆ ಎಣ್ಣೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಅನೇಕ ಕಡೆಗಳಲ್ಲಿ ಮಾರಾಟವಾಗುತ್ತಿರುವುದರ ಕುರಿತು ಮಾತನಾಡಿದ ಅವರು ಅಡುಗೆ ಎಣ್ಣೆ ಸೇರಿದಂತೆ ಅಗತ್ಯವಾಗಿ ಬೇಕಾಗುವ ಸಾಮಗ್ರಿಗಳು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಎಚ್ಚರಿಸಿದರು.

ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಹಾರ ಇಲಾಖೆಯಿಂದ ಖಾದ್ಯ ತೈಲ ಮತ್ತು ಖಾದ್ಯತೈಲ ಬೀಜಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರಗಳ ನೋಂದಣಿ ಬಗ್ಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೆಚ್ಚು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಎಣ್ಣೆ, ಅಕ್ಕಿ ಮತ್ತಿತರ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿವೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ ವಿಧಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಜನರಿಗೆ ಯಾವುದೇ ರೀತಿಯ ಲೋಪ ಹಾಗೂ ಸಮಸ್ಯೆಗಳು ಬಾರದಂತೆ ಅಂಗಡಿ ಮಾಲೀಕರು ವ್ಯವಹರಿಸಬೇಕು, ಪ್ರತಿ ದಿನ ತಮ್ಮಲ್ಲಿರುವ ಸ್ಟಾಕ್ ಯಾವುದು ಎಷ್ಟಿದೆ ಹಾಗೂ ಅದರ ದರವನ್ನು ಎಲ್ಲರಿಗೂ ಕಾಣುವ ರೀತಿ ಫಲಕಗಳ ರೀತಿ ಹಾಕಬೇಕು ಎಂದರು. ಈ ಕುರಿತು ನಿಗಾವಹಿಸಲು ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲೆಯ ಎಲ್ಲಾ ಅಂಗಡಿ ದಾಸ್ತಾನು ಮಳಿಗೆಗಳನ್ನು ಪರಿಶೀಲನೆ ಮಾಡುತ್ತಾರೆ ಎಂದರು. 

ಈ ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಹಾಗೂ ನಗರದ ಟ್ರೇಡರ್ ಮಾಲೀಕರು ಉಪಸ್ಥಿತರಿದ್ದರು.