ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಹಾ ಶಿವರಾತ್ರಿಯ ಅಂಗವಾಗಿ ಇಂದು ಶೃಂಗೇರಿಯಲ್ಲಿ ಬೆಟ್ಟದ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಯ ಮಹಾರಥೋತ್ಸವ ಶ್ರದ್ಧಾ ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಸಂಜೆಯ ವೇಳೆ ನಡೆಯಿತು. 

ಇದನ್ನೂ ಓದಿ : ವಿಶ್ವ ಶಾಂತಿಪಾಲನಾ ಪಡೆಗೆ ಆಯ್ಕೆಯಾದ ದಕ್ಷ ಅಧಿಕಾರಿ ಚಿಕ್ಕಮಗಳೂರಿನ ಅಡಿಷನಲ್ ಎಸ್ಪಿ ಎನ್.ಎಸ್ ಶೃತಿ

ಪವಿತ್ರ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿರುವ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶಿವರಾತ್ರಿಯ ಅಂಗವಾಗಿ ಕಳೆದ ಅನೇಕ ವರ್ಷಗಳ ಹಿಂದೆ ನಡೆಸುತ್ತಿದ್ದ ಶೈಲಿಯಲ್ಲೇ ಇಂದೂ ಕೂಡ ಭಕ್ತಿಭಾವಗಳಿಂದ ವಿಜೃಂಭಣೆಯ  ಮಹಾರಥೋತ್ಸವ ನಡೆಯಿತು. 

ಇಂದು ಬೆಳಿಗ್ಗೆ ಶೃಂಗೇರಿ ಮಠದ ರಾಜಗೋಪುರದಿಂದ ಮುದ್ರಾಡಿ ಅನಂತೇಶ್ವರ ದೇಗುಲದವರೆಗೆ ರಥೋತ್ಸವ ಜರುಗಿತು, ನಂತರ ಸಂಜೆ 5.30 ಕ್ಕೆ ಮುದ್ರಾಡಿ ಅನಂತೇಶ್ವರ ದೇವಾಲಯದ ಮುಂಭಾಗದಿಂದ ಆರಂಭವಾದ ಶ್ರೀ ಮಲಹಾನಿಕರೇಶ್ವರ ರಥೋತ್ಸವವು ಭಾರತೀಬೀದಿಯಲ್ಲಿ ಸಾಗಿ ಪುನಃ ಶ್ರೀ ಮಠದ ಮುಂಭಾಗಕ್ಕೆ ಬಂದು ಸಮಾಪನೆಗೊಂಡಿತು. ರಥೋತ್ಸವದಲ್ಲಿ ಗಜ, ಅಶ್ವ, ಛತ್ರಿ, ಚಾಮರಗಳ ಜೊತೆ ಅದ್ಧೂರಿಯಾಗಿ ರಥೋತ್ಸವ ನಡೆಯಿತು.  

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹರ ಹರ ಶಂಕರ,ಜೈ ಜೈ ಶಂಕರ ಎನ್ನುತ್ತಾ ರಥವನ್ನು ಎಳೆದರು. ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ರಥಕ್ಕೆ ಅಭಿಮುಖವಾಗಿ ರಥೋತ್ಸವದಲ್ಲಿ ಸಾಗಿದರು. ಭಜನೆ, ದೇವರ ನಾಮಗಳನ್ನು ಭಕ್ತಿಯಿಂದ ಸ್ಮರಿಸುತ್ತಾ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.