ಹಾಸನ : (ನ್ಯೂಸ್ ಮಲ್ನಾಡ್ ವರದಿ ) ಮನೆ ಮುಂದೆ ಇದ್ದ ಗಂಧದ ಮರವನ್ನು ಕಳ್ಳರು ಕಳ್ಳತನ ಮಾಡಲು ಯತ್ನಿಸಿ ಮನೆಯ ಸಾಕು ನಾಯಿಯ ಎಚ್ಚರಿಕೆಯಿಂದ ಕಳ್ಳತನ ತಪ್ಪಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ್ದ ಕಾರ್ ಕಳ್ಳತನ ನಡೆಸಿದ ಚಾಲಾಕಿ ಕಳ್ಳರು

ಹಾಸನದ ಹೇಮಾವತಿ ನಗರದ ಎರಡನೇ ಅಡ್ಡ ರಸ್ತೆ ನಿವಾಸಿ ಹೊಸೂರು ನಾಗಣ್ಣ ಮತ್ತು ಇನ್ನೋರ್ವರ ಮನೆಯ ಮುಂದಿದ್ದ ಗಂಧದ ಮರವನ್ನು ಕಳ್ಳರು ಕಡಿದು ಸಾಗಾಟ ನಡೆಸಲು ತಯಾರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಸಾಕು ನಾಯಿ ಬೊಗಳಿ ಮನೆಯವರು ಎಚ್ಚರಾಗುವಂತೆ ಮಾಡಿದೆ. ನಾಯಿ ಬೊಗಳುವುದನ್ನು ಕೇಳಿ ಎಚ್ಚರಗೊಂಡ ಮನೆಯವರು ತಡ ಮಾಡದೇ ಹೊರ ಬಂದಿದ್ದಾರೆ. ಈ ಸಮಯದಲ್ಲಿ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮರವನ್ನು ಗರಗಸದಿಂದ ಕಡಿದು ಹಾಕಿದ್ದು ಕದ್ದೊಯ್ಯುವ ಯತ್ನ ವಿಫಲವಾಗಿದೆ. 

ಈ ಬಳಿಕ ಇನ್ನೊಂದು ಮನೆಯ ಎದುರಿಗಿನ ಗಂಧದ ಮರವನ್ನು ಕಡಿಯುವ ಶಬ್ದವನ್ನು ಕೇಳಿ ಮನೆಯವರು ಹೊರಬಂದು ಕೂಗಾಡಿದ್ದಾರೆ, ಈ ಸಂದರ್ಭದಲ್ಲಿ ಮೂವರು ಕಳ್ಳರು ಅಲ್ಲಿಂದ ಓಡಿದ್ದು ಕಳ್ಳರ ಬಂಧನಕ್ಕಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ. 

ಘಟನೆ ನಡೆಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಾಯಿಯ ಎಚ್ಚರಿಕೆ ಹಾಗೂ ಮನೆಯವರ ಸಮಯ ಪ್ರಜ್ಞೆಯಿಂದ ಗಂಧದ ಮರ ಕದ್ದೊಯ್ಯುವುದು ನಿಂತಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಈ ಪ್ರದೇಶದ ಸಾರ್ವಜನಿಕರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಸಾರ್ವಜನಿಕರು ಕೋರಿದ್ದಾರೆ.