ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಫೆಬ್ರವರಿ 27 ರ ಭಾನುವಾರ ಮಾರಕ ಕಾಯಿಲೆಯಾದ ಪೊಲಿಯೋವನ್ನು ತಡೆಗಟ್ಟುವ ಸಲುವಾಗಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ನಡೆದಿದ್ದು ಎಲ್ಲೆಡೆ ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಅಂತೆಯೇ ಶೃಂಗೇರಿಯಲ್ಲೂ ಕೂಡ ಅತ್ಯುತ್ತಮವಾಗಿ ಪೋಲಿಯೋ ಲಸಿಕೆ ವಿತರಣೆ ನಡೆಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಾದ್ಯಂತ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಅತ್ಯಂತ ಯಶಸ್ವಿಯಾಗಿ ನೀಡಲಾಗಿದ್ದು ಈ ಕಾಯಕಕ್ಕೆ ವೈದ್ಯಕೀಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅಂಗನವಾಡಿ ಶಿಕ್ಷಕಿಯರು, ಸಂಬಂಧಿಸಿದ ಸಿಬ್ಬಂದಿಗಳು ಹಾಗೂ ಇಲಾಖೆಯ ಇತರ ಅಧಿಕಾರಿಗಳು ಸಾಥ್ ನೀಡಿ ಪೋಲಿಯೋ ಮುಕ್ತ ಭಾರತದ ನಿರ್ಮಾಣಕ್ಕೆ ಸಹಕಾರ ನೀಡಿದರು. 

ಪ್ರತೀ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪೋಲಿಯೋ ಲಸಿಕೆ ವಿತರಣೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ, ಪೋಲಿಯೋ ಮುಕ್ತ ಸಮಾಜಕ್ಕಾಗಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಪೋಲಿಯೋ ಲಸಿಕೆ ಕಡ್ಡಾಯವಾಗಿ ಪಡೆಯಬೇಕಿದೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು - ಡಾ. ದಯಾನಂದ್ ತಾಲೂಕು ವೈದ್ಯಾಧಿಕಾರಿಗಳು ಶೃಂಗೇರಿ

ಶೃಂಗೇರಿಯ ತಾಲೂಕು ಆಸ್ಪತ್ರೆಯಲ್ಲಿ, ಶೃಂಗೇರಿಯ ಮುಖ್ಯ ದ್ವಾರವಾದ ವೆಲ್ಕಮ್ ಗೇಟ್ ನಲ್ಲೊಂದು ಬೂತ್, ಶೃಂಗೇರಿಯ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿ, ಶೃಂಗೇರಿಯ ಬಸ್ಟಾಂಡ್ ಹಾಗೂ ಗ್ರಾಮಗಳ ಸಮೀಪದ ಅಂಗನವಾಡಿಗಳಲ್ಲಿ ಪೋಲಿಯೋ ಬೂತ್ ಗಳ ನಿರ್ಮಾಣ ಮಾಡಿ  ಅತ್ಯಗತ್ಯವಾದ ಎರಡು ಹನಿ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ನೀಡಲಾಗಿದೆ. ಅಂತೆಯೇ ನಿನ್ನೆಯ ಶಿವರಾತ್ರಿ ಹಬ್ಬದ ದಿನ ಶೃಂಗೇರಿ ತಾಲೂಕು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಶೃಂಗೇರಿಯ ಬೆಟ್ಟದ ಮಲಹಾನಿಕರೇಶ್ವರ ದೇವಾಲಯದ ಮುಂಭಾಗದಲ್ಲಿ ಪೊಲಿಯೋ ಲಸಿಕೆ ಪಡೆಯದ ಪುಟ್ಟ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಈ ಮಾರಕ ಕಾಯಿಲೆಯಿಂದ ಮಕ್ಕಳು ಸುರಕ್ಷಿತವಾಗಿರುವಂತೆ ಮಾಡಿದರು.

ವೈದ್ಯಕೀಯ ಸಿಬ್ಬಂದಿಗಳ ಈ ಕಾಯಕಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು ಈ ಬಾರಿ ಶೃಂಗೇರಿಯಲ್ಲಿ ದಾಖಲೆಯ ಮಟ್ಟದಲ್ಲಿ ಎಂಬಂತೆ 2322 ಪೊಲಿಯೋ ಲಸಿಕೆ ಹಾಕಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.