ಮೂಡಿಗೆರೆ : ಹರಿಹರಪುರ ಶ್ರೀ ಮಠದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಮಹಾ ಕುಂಭಾಭಿಷೇಕದ ಅಂಗವಾಗಿ ಪ್ರತೀ ಮನೆಗಳಿಗೂ ಆಹ್ವಾನ ಪತ್ರಿಕಾ ವಿತರಣಾ ಕಾರ್ಯಕ್ರಮ ಬಾಳೂರು ಹೋಬಳಿಯಲ್ಲಿ ನಡೆಯಿತು.

ಇದನ್ನೂ ಓದಿ : ತೀರ್ಥಹಳ್ಳಿ: ಗುಂಡೇಟು ತಗುಲಿ ಬಿಜೆಪಿ ನಾಯಕ ಸಾವು, ಗೃಹ ಸಚಿವರ ಭೇಟಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಸಭೆ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮದ ಆರಂಭವಾಯಿತು. ಹರಿಹರಪುರ ಶ್ರೀ ಮಠದಲ್ಲಿ ಏಪ್ರಿಲ್ 10 ರಿಂದ 24 ರ ವರೆಗೆ ನಡೆಯುವ ಮಹಾ ಕುಂಭಾಭಿಷೇಕದ ಆಹ್ವಾನ ಪತ್ರಿಕೆಯನ್ನು ಜಾತಿ,ಮತ, ಪಂಥ, ಪಕ್ಷ ಬೇಧವಿಲ್ಲದೆ ಎಲ್ಲರ ಮನೆಗೆ ತಲುಪಿಸುವ ವಿಶೇಷ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಹದಿನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಹರಿಹರಪುರ ಗುರುಕುಲದ ವ್ಯವಸ್ಥಾಪಕರಾದ ಉಮೇಶ್ ಜೀ ತಿಳಿಸಿದರು. ಶ್ರೀಗಳು ಈ ಹಿಂದಿನಿಂದಲೂ ಧರ್ಮದ ರಕ್ಷಣೆಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ, ಈಗಾಗಲೇ 35 ಕ್ಕು ಅಧಿಕ ಜನರಿಗೆ ಶಿವ ದೀಕ್ಷೆ ನೀಡಿದ್ದಾರೆ, ಸಮಾಜಮುಖಿ ಹಾಗೂ ಧರ್ಮದ ಉಳಿವಿಗಾಗಿ ಶ್ರೀಗಳು ಸದಾ ಮಾರ್ಗದರ್ಶನ ನೀಡುತ್ತಾರೆ ಎಂದರು.

ಶ್ರೀಗಳ ಆಪ್ತ ಕಾರ್ಯದರ್ಶಿ ರಘುನಾಥ್ ಜೀ ಅವರು ಮಾತನಾಡಿ ಶ್ರೀ ಮಠದಲ್ಲಿ 14 ದಿನಗಳ ಕಾಲ ನಿರಂತರ ಕಾರ್ಯಕ್ರಮವಿದ್ದು ಏಪ್ರಿಲ್ 10 ರಂದು ಮಹಾಗಣಪತಿ ಹೋಮದೊಂದಿಗೆ ಆರಂಭವಾಗಿ 24 ರಂದು ತುಂಗಾನದಿಯಲ್ಲಿ ನಡೆಯುವ ತೆಪ್ಪೋತ್ಸವದೊಂದಿಗೆ ಸಂಪನ್ನವಾಗಲಿದೆ ಎಂದರು. ಪ್ರತಿದಿನ ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ನಾಯಕರು ಈ ಮಹಾ ಕುಂಭಾಭಿಷೇಕ ದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ನೀಡಿದರು.

ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮರ್ಕಲ್ ಲೋಕೇಶ್, ರವಿ ಪಟೇಲ್ ಕೂವೆ, ಬಿಜೆಪಿ ತಾಲೂಕು ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಬಿಜೆಪಿ ಮುಖಂಡ ರಾದ ಸತೀಶ್ ಬಾಳೂರು, ಪೂರ್ಣೇಶ್ ಬಾಳೂರು, ಗ್ರಾಮ ಪಂಚಾಯಿತಿ ಸದಸ್ಯರಾದ ಮನೋಜ್, ಸಚಿನ್ ಮಾಳಿಂಗನಾಡು, ಭಜರಂಗದಳದ ಪ್ರಮುಖರಾದ ಸಮರ್ಥ್ ,ಸುನಿಲ್ ಕೂವೆ, ಜಯಪಾಲ್,ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರು ಭಾಗವಹಿಸಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು