ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮನುಷ್ಯರಿಗೆ ಮೃತ್ಯು ಯಾವ ರೂಪದಲ್ಲಿರುವುದು ಎಂದು ಊಹಿಸಲು ಸಾಧ್ಯವಿಲ್ಲ, ಅಂತೆಯೇ ಇಲ್ಲೋರ್ವ ಮಹಿಳೆ ಅಡುಗೆ ತಯಾರಿಸುವಾಗ ಹಾವು ಕಚ್ಚಿ ಮೃತಪಟ್ಟ ದುರ್ಘಟನೆ ವರದಿಯಾಗಿದೆ. 

ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮೇಲಿಗೆ ಬೇಸಿಗೆ ಗ್ರಾಮದ ಸೌಮ್ಯ ಎಂಬ 24 ವರ್ಷ ಪ್ರಾಯದ ಗೃಹಿಣಿಗೆ ನಾಗರಾಜ್ ಎಂಬುವವರೊಂದಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಈ ದಂಪತಿಗಳಿಗೆ ಮೂರು ವರ್ಷ ಪ್ರಾಯದ ಗಂಡು ಮಗುವಿದೆ. 

ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ವಿಷಕಾರಿ ಹಾವೊಂದು ಸೌಮ್ಯ ಅವರಿಗೆ ಕಚ್ಚಿದೆ, ಆದರೆ ಹಾವು ಕಚ್ಚಿರುವ ಕುರಿತು ಸೌಮ್ಯಳಿಗೆ ಗೊತ್ತಾಗಲಿಲ್ಲ. ಹಾವು ಕಚ್ಚಿದ ಕೆಲ ಸಮಯದ ಬಳಿಕ ಕಾಲಿನಲ್ಲಿ ಸಂಭವಿಸಿದೆ ಹಾಗೂ ತೀವ್ರವಾಗಿ ಕಾಲು ನೋವು ಉಂಟಾಗಿದೆ. ಈ ಕುರಿತಾಗಿ ಆಕೆಯು ತಿಳಿಸುತ್ತಿದ್ದಂತೆ ಅನುಮಾನಗೊಂಡು ಹಾವು ಕಚ್ಚಿರುವ ಕುರಿತು ಆತಂಕ ವ್ಯಕ್ತಪಡಿಸಿದ ಕುಟುಂಬಸ್ಥರು ತಕ್ಷಣವೇ ಹೊಸನಗರದ ಆಸ್ಪತ್ರೆಗೆ ಸೌಮ್ಯಳನ್ನು ದಾಖಲು ಮಾಡಿದ್ದಾರೆ. 

ಹೊಸನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆ. ಅಂತೆಯೇ ಕುಟುಂಬಸ್ಥರು ಸೌಮ್ಯಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸೌಮ್ಯ ಕೊನೆಯುಸಿರೆಳೆದಿದ್ದಾರೆ. 

ಸೌಮ್ಯಳ ಸಾವಿನ ಕುರಿತು ಪತಿ ಹಾಗೂ ಕುಟುಂಬಸ್ಥರು ಕಂಬನಿ ಮಿಡಿದಿದ್ದು ಇಡೀ ಕುಟುಂಬವೇ ಬೇಸರದಲ್ಲಿದೆ. ಘಟನೆಯ ಕುರಿತು ಹೊಸ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.