ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆಗೆ  ತಯಾರಿ ನಡೆಸುತ್ತಿದೆ. 

ಈ ಕುರಿತು ಹರ್ಷ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಗೋವಾದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ ರವಿ ಪುಟ್ಟ ರಾಜ್ಯವಾದ ಗೋವಾದಲ್ಲಿ ಬಿಜೆಪಿಯು ಗೆದ್ದು ಮತ್ತೆ ಅಧಿಕಾರಕ್ಕೇರಿರುವುದು ಅತ್ಯಂತ ಉತ್ತಮ ಸಂಗತಿ. ಈ ಕಾರ್ಯಕ್ಕೆ ಮಹತ್ತರವಾದ ಬೆನ್ನೆಲುಬು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜನಪರ ಕಾಳಜಿ ಹೊಂದಿರುವ ಬಿಜೆಪಿ ಸರ್ಕಾರ ಎಂದರು. 

ಚುನಾವಣಾ ಆರಂಭದ ಮೊದಲು ಆಡಳಿತ ಪಕ್ಷದ ವಿರುದ್ಧ ವ್ಯಾಪಕವಾದ ವಿರೋಧವಿದೆ. ಆಡಳಿತ ವಿರೋಧಿ ಅಲೆ ಎದ್ದಿದೆ ಎಂಬೆಲ್ಲ ಸುಳ್ಳುಗಳನ್ನು ವಿರೋಧ ಪಕ್ಷಗಳು ಹಬ್ಬಿಸಿದ್ದವು ಆದರೆ ಅದೆಲ್ಲ ಈಗ ಹುಸಿಯಾಗಿದೆ ಎಂದು ಜನರೇ ಪಂಚರಾಜ್ಯಗಳ ತೀರ್ಪಿನ ಮೂಲಕ ಸ್ಪಷ್ಟ ಪಡಿಸಿದ್ದಾರೆ ಎಂದರು. 


ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಜನರಿಗೆ ನೀಡಿರುವ ಆಡಳಿತ ಹಾಗೂ ಮಾಡಿರುವ ಕೆಲಸಗಳು ಇಂದಿನ  ಗೆಲುವಿಗೆ ಸಾಕ್ಷಿಯಾಗಿದೆ ಎಂದರು. ರಾಷ್ಟ್ರೀಯತೆ ಹಾಗೂ ದೇಶದ ಕುರಿತಾದ ತತ್ವ ಸಿದ್ಧಾಂತ ಹೊಂದಿರುವವರು ಬಿಜೆಪಿಯಲ್ಲಿದ್ದಾರೆ ಅದೇ ನಮ್ಮ ಗೆಲುವಿಗೆ ಪೂರಕವಾದುದು ಹಾಗೂ ಬಿಜೆಪಿಯ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಈ ಎಲ್ಲಾ ಅಂಶಗಳಿಂದಾಗಿ ಇಂದು ಗೆಲುವು ನಮ್ಮದಾಗಿದೆ ಹಾಗೂ ಈ ಗೆಲುವು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.