ರಾಜ್ಯ : (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಕಲಾಪದ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು. 

ಇದನ್ನೂ ಓದಿ : ಕಡೂರು : ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು

ಇಂದು ಸದನದ ಶೂನ್ಯ ವೇಳೆಯಲ್ಲಿ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆಯ ಕುರಿತು ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, 2022 - 23 ನೆಯ ಸಾಲಿನ ಶೈಕ್ಷಣಿಕ ವರ್ಷದಿಂದ ಗುಜರಾತ್ ರಾಜ್ಯದ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯಲ್ಲಿನ ಮೌಲ್ಯಗಳನ್ನು ಹಾಗೂ ತತ್ವಗಳನ್ನು ದಾಖಲಿಸುವುದಾಗಿ ಗುಜರಾತ್ ಸರ್ಕಾರದ ಶಿಕ್ಷಣ ಸಚಿವರು ಘೋಷಣೆ ಮಾಡಿದ್ದಾರೆ, ಅಂತೆಯೇ ರಾಜ್ಯದಲ್ಲಿಯೂ ಕೂಡ ಈ ಕುರಿತು ಹೆಚ್ಚಿನ ಆದ್ಯತೆ ನೀಡಿ ಜೀವನದ ಸಾರವನ್ನು ತಿಳಿಸುವ ಭಗವದ್ಗೀತೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ಕೋರಿದರು.

ಭಗವದ್ಗೀತೆಯಲ್ಲಿರುವ ಮೌಲ್ಯಗಳು ಮತ್ತು ತತ್ವಗಳನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸುವ ಉದ್ದೇಶದಿಂದ ಗುಜರಾತ್ ಸರ್ಕಾರ ಈ ನಿರ್ಣಯ ಕೈಗೊಂಡಿದ್ದು, ಇದು ಅಧುನಿಕ ಮತ್ತು ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳನ್ನು, ಜ್ಞಾನ ವ್ಯವಸ್ಥೆಗಳ ಪರಿಚಯವನ್ನು ಶಿಫಾರಸ್ಸು ಮಾಡುವ ಕೇಂದ್ರದ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿದೆ ಎಂದರು.

ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ತತ್ವಬೋಧನೆಯೇ ಭಗವದ್ಗೀತೆ ಇದು ಜೀವನದ ಸಾರವನ್ನು ವಿವರಿಸುತ್ತದೆ. ನಮ್ಮ ಮಕ್ಕಳು ಭಗದ್ಗೀತೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು ಆ ಕಾರಣಕ್ಕಾಗಿ ಪಠ್ಯದಲ್ಲಿ ಅಳವಡಿಸುವುದು ಅತ್ಯವಶ್ಯಕ ಎಂದರು.

ಈ ಕುರಿತು  ಸರ್ಕಾರದ ಪರವಾಗಿ ಉತ್ತರಿಸಿದ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳ ಜೊತೆ ಚರ್ಚೆಮಾಡಿ ಭಗವದ್ಗೀತೆಯನ್ನು ಪಠ್ಯಗಳಲ್ಲಿ ಅಳವಡಿಸುವ ಬಗ್ಗೆ ಸಮಿತಿಯ ರಚನೆ ಮಾಡಿ ಈ ಕುರಿತು ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು  ವಿಧಾನ ಪರಿಷತ್ ಸದಸ್ಯರಾದ ಎಂ.ಕೆ ಪ್ರಾಣೇಶ್ ತಿಳಿಸಿದರು.