ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಒಂದೇ ದಿನದಲ್ಲಿ ಕೊಟ್ಟಿಗೆಹಾರದ ಸುತ್ತ ಮುತ್ತಲಿನ ಕೆಲ ಪ್ರದೇಶಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. 

ಇದನ್ನೂ ಓದಿ : 500 ಕೆಜಿ ಕಾಳುಮೆಣಸು ಕದ್ದಿದ್ದ ಖತರ್ನಾಕ್ ಕಳ್ಳರು ಪೊಲೀಸರ ಬಲೆಗೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಅತ್ತಿಗೆರೆ ಸರಕಾರಿ ಪ್ರಾಥಮಿಕ ಪಾಠಶಾಲೆಯ ಬೀಗ ಒಡೆದು ನುಗ್ಗಿದ ಕಳ್ಳರು ಸುಮಾರು ಐವತ್ತು ಸಾವಿರ ರೂಪಾಯಿ ಮೌಲ್ಯದ ಪ್ರೊಜೆಕ್ಟರ್ ನ್ನು ಕದ್ದಿದ್ದಾರೆ. ಶಾಲೆಯ ಮೂರು ಕೊಠಡಿಗಳ ಬೀಗ ಓಡೆದಿದ್ದಾರೆ, ಶಾಲೆಯ ಮಾಡಿನ ಹಂಚುಗಳನ್ನು ಒಡೆದಿದ್ದಾರೆ. ಏಣಿಯನ್ನು ಬಳಸಿ ಒಂದು ರೂಮಿನಿಂದ ಇನ್ನೊಂದು ರೂಂ ಗೆ ನುಗ್ಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 

ಕೇವಲ ಶಾಲೆ ಮಾತ್ರವಲ್ಲದೆ ಕೋಳಿ ಅಂಗಡಿ ಹಾಗೂ ಗ್ಯಾರೇಜ್ ಗೆ ಸಹ ಕಳ್ಳರು ನುಗ್ಗಿದ್ದಾರೆ. ಕೋಳಿ ಅಂಗಡಿಯಲ್ಲಿಟ್ಟಿದ್ದ ನಾಲ್ಕು ಸಾವಿರ ಹಣವನ್ನು ಕಳ್ಳರು ಎಗರಿಸಿದ್ದಾರೆ ಎಂದು ತಿಳಿದುಬಂದಿದೆ. ಸಮೀಪದ ಗ್ಯಾರೇಜ್ ನಲ್ಲೂ ಸಹ ಕಳ್ಳರು ಕೈಚಳಕ ತೋರಿದ್ದಾರೆ.

 


ಈ ಕುರಿತು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು