ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅನೇಕ ಜಿಲ್ಲೆಗಳಲ್ಲಿ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಚಿಕ್ಕಮಗಳೂರು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಅಡಿಕೆ ಕಳ್ಳತನ ನಡೆಸಿದ್ದ ನಾಲ್ವರು ಕಳ್ಳರನ್ನು ಸೆರೆ ಹಿಡಿದ ಪೊಲೀಸರು ; ಬಂಧಿತರಿಂದ 21 ಕ್ವಿಂಟಾಲ್ ಅಡಿಕೆ ವಶಕ್ಕೆ
ಹಗಲಿನ ವೇಳೆಯಲ್ಲಿ ಜುಪಿಟರ್ ದ್ವಿಚಕ್ರ ವಾಹನದಲ್ಲಿ ನಗರಗಳಲ್ಲಿ ಸಂಚರಿಸುವ ಈತ ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಆತನ ಬಳಿಯಿರುವ ರಾಡ್ ನಿಂದ ಬೀಗವನ್ನು ಮೀಟಿ ಮನೆಯಲ್ಲಿರುವ ವಸ್ತುಗಳನ್ನು ದರೋಡೆ ಮಾಡಿದ್ದಾನೆ, ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ಐದು ಜಿಲ್ಲೆಗಳಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು ಹಗಲಿನ ವೇಳೆಯಲ್ಲಿ ಈ ಕಳ್ಳ ತನ್ನ ಕೈಚಳಕವನ್ನು ವಿವಿಧೆಡೆ ತೋರಿದ್ದಾನೆ.
ಎಲ್ಲಾ ಮನೆಗಳ ಮೇಲೂ ಒಂದೇ ರೀತಿಯಲ್ಲಿ ನಡೆಸಿದ ಕಳ್ಳತನವನ್ನು ಕಂಡು ಪೊಲೀಸರು ಈತನ ಜಾಡು ಹಿಡಿದಾಗ ಈತ ನಡೆಸಿದ ಒಂದೊಂದೇ ಕೃತ್ಯಗಳು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನ ರಾಂಪುರ ಹಾಗೂ ದಂಟರಮಕ್ಕಿಯಲ್ಲಿ ನಡೆದ ಕಳ್ಳತನದ ಪ್ರಕರಣವನ್ನು ಬೇಧಿಸುವ ಸಲುವಾಗಿ ಪೊಲೀಸರು ಕಾರ್ಯಾಚರಣೆಗಿಳಿದಾಗ ಹಳೆಯ ಆರೋಪಿಯಾದ ಹಾಸನ ಮೂಲದ ರಂಗೇಗೌಡ ಎಂಬಾತನ ಬೆರಳಚ್ಚು ಹೊಂದಾಣಿಕೆಯಾಗಿದೆ. ಈತನನ್ನು ವಿಚಾರಣೆಯ ಸಲುವಾಗಿ ಠಾಣೆಗೆ ಕರೆಸಿದಾಗ ಇದೊಂದೇ ಕೃತ್ಯವನ್ನು ಮಾಡಿರುವುದಾಗಿ ಮೊದಲಿಗೆ ಬಾಯ್ಬಿಟ್ಟಿದ್ದಾನೆ. ವಿಚಾರಣೆ ಮುಂದುವರೆದ ಬಳಿಕ ಈತನು ಚಿಕ್ಕಮಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಕೈಚಳಕ ತೋರಿರುವುದು ತಿಳಿದು ಬಂದಿದೆ.
899.820 ಗ್ರಾಂ ಬಂಗಾರದ ಗಟ್ಟಿ, 1660 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ಒಂದು ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನವನ್ನು ಬಂಧಿತನಿಂದ ಪೊಲೀಸರು ವಶಕ್ಕೆ ಪಡೆದಿದ್ದು ಇದರ ಒಟ್ಟು ಬೆಲೆ 52,68,778 ರೂ ಆಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕದ್ದ ಒಡವೆಗಳನ್ನು ಹೆಂಗಸರಿಂದ ಮಾರಾಟ ಮಾಡಿಸುತ್ತಿದ್ದ ಚಾಲಾಕಿ ಕಳ್ಳ :
ಬೀಗ ಹಾಕಿರುವ ಮನೆಗಳ ಬೀಗವನ್ನು ಮುರಿದು ದರೋಡೆ ಮಾಡುತ್ತಿದ್ದ ಈತ ಕದ್ದ ಆಭರಣಗಳನ್ನು ಹೆಂಗಸರ ಬಳಿ ಕೊಟ್ಟು ತನಗೆ ಜೀವನದಲ್ಲಿ ಬಹಳಷ್ಟು ಕಷ್ಟ ಇರುವುದಾಗಿ ಮತ್ತು ಆಭರಣಗಳನ್ನು ಚಿನ್ನದಂಗಡಿಗೆ ಕೊಡಲು ಮುಜುಗರವಾಗುತ್ತದೆ ಎಂದು ಅವರನ್ನು ಪುಸಲಾಯಿಸಿ ಒಡವೆಗಳನ್ನು ಮಾರಿ ಹಣ ಮಾಡುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಈತನ ಮೇಲೆ ಇನ್ನೂ ಹೆಚ್ಚಿನ ಪ್ರಕರಣಗಳು ಇರುವ ಶಂಕೆ ವ್ಯಕ್ತವಾಗಿದ್ದು ಸದ್ಯದ ಮಟ್ಟಿಗೆ ಐದು ಜಿಲ್ಲೆಗಳಲ್ಲಿ 17 ಪ್ರಕರಣಗಳು ಈತನ ಮೇಲೆ ದಾಖಲಾಗಿದೆ. ಸಂಪೂರ್ಣ ತನಿಖೆಯ ಬಳಿಕವಷ್ಟೆ ಉಳಿದ ಪ್ರಕರಣಗಳ ಕುರಿತು ಮಾಹಿತಿ ದೊರೆಯಬೇಕಿದೆ.
ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಂ.ಹೆಚ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ ಎನ್.ಎಸ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರಭು.ಟಿ ರವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ಗುರುಪ್ರಸಾದ್ ಎನ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶರತ್, ನಾಗೇಂದ್ರ ನಾಯ್ಕ, ಸತೀಶ್, ಶಶಿಧರ್ ಎಲ್.ಡಿ ಹಾಗೂ ಠಾಣೆಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

0 Comments