ಚಿಕ್ಕಮಗಳೂರು : ಜಾತ್ರಾ ಸಮಯದಲ್ಲಿ ಕೇವಲ ಹಿಂದೂಗಳಷ್ಟೇ ವ್ಯಾಪಾರ ವಹಿವಾಟನ್ನು ಮಾಡಬೇಕು ಹಿಂದೂಯೇತರರು ಜಾತ್ರೆಯ ಸಮಯದಲ್ಲಿ ಅಂಗಡಿ ತೆರೆದು ವ್ಯಾಪಾರ ವಹಿವಾಟನ್ನು ನಡೆಸಬಾರದು ಎಂಬ ಅಭಿಯಾನ ಕರಾವಳಿಯಲ್ಲಿ ಆರಂಭವಾಗಿ ಇದೀಗ ಮಲೆನಾಡನ್ನು ಹಬ್ಬಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಶ್ರೇಷ್ಠ ಧಾರ್ಮಿಕ ಕ್ಷೇತ್ರವಾದ ಶ್ರೀ ಆದಿ ಸುಬ್ರಹ್ಮಣ್ಯ ದೇವರ ಜಾತ್ರಾ ಮಹೋತ್ಸವಕ್ಕೆ ಯಾವುದೇ ಕಾರಣಕ್ಕೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಬಿಡುವುದಿಲ್ಲ ಹಿಂದೂ ಜಾಗೃತನಾಗಿದ್ದಾನೆ ಎಂಬ ಬ್ಯಾನರ್ ಒಂದನ್ನು ಸ್ಥಳೀಯರು ದೇವಸ್ಥಾನದ ಸಮೀಪದಲ್ಲಿ ಹಾಕಿದ್ದಾರೆ. 

ಕಳೆದ ಎರಡು ದಿನಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಕುರಿತಾದ ಅಭಿಯಾನ ಹಾಗೂ ಮನವಿ ಪತ್ರ ಸಲ್ಲಿಕೆಯನ್ನು ಭಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸೇರಿ ಗ್ರಾಮ ಪಂಚಾಯತ್ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಆಡಳಿತ ಮಂಡಳಿಗಳಿಗೆ ನೀಡುವ ಮೂಲಕ ಧರ್ಮದ ಆಧಾರದ ಮೇಲೆ ವ್ಯಾಪಾರ ವಹಿವಾಟು ನಡೆಯುವ ರೀತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿವೆ. 

ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ತಳಿಹಳ್ಳ ಇಳೆಹೊಳೆ, ಜಕ್ಕನಮನೆ, ಕಟ್ರುಮನೆ, ಉಳುವಾಗಿಲು ಗ್ರಾಮಸ್ಥರು ಮಾರ್ಚ್ 25 ಹಾಗೂ 26 ರಂದು ನಡೆಯುವ ಮಾರಿ ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಸದಸ್ಯರಿಗೆ ಮನವಿ ನೀಡಿದ್ದಾರೆ. 

ಶೃಂಗೇರಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುರಾತನ ಕ್ಷೇತ್ರವಾದ ಶ್ರೀ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಲ್ಲೂ ಕೂಡ ಸ್ಥಳೀಯರು ಮರ್ಕಲ್ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಕಿಗ್ಗಾ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಾಗೂ ಶೃಂಗೇರಿಯ ಅಡ್ಡಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿತ್ರವಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಜಾತ್ರೆಗೆ ಹಿಂದೂಯೇತರರನ್ನು ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಕೋರಿದ್ದಾರೆ.

ಮಲೆನಾಡಿನ ಅನೇಕ ದೇವಾಲಯಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದು ಎಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದ್ದು ಮುಂದಿನ ದಿನಗಳಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆಯುವ ಬೆಳವಣಿಗೆಗಳ ಕುರಿತು ಕಾದು ನೋಡಬೇಕಿದೆ. 

ತನು ಕೊಟ್ಟಿಗೆಹಾರ, ವರದಿಗಾರರು