ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಸಹಕಾರ ಸಾರಿಗೆ ಸಂಸ್ಥೆಯ ಎಂ.ಡಿ ಗಾಡ್ವಿನ್ ಜಯಪ್ರಕಾಶ್ ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
ಬಹುಶಃ ಸಂಪೂರ್ಣ ಮಲೆನಾಡನ್ನು ಕಂಡಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗಿಳಿಯದೇ ಎರಡು ವರ್ಷಗಳು ಕಳೆದಿವೆ ಆರ್ಥಿಕ ಸಂಕಷ್ಟದ ಕಾರಣ ಹೇಳಿ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುನ್ನೂರಕ್ಕೂ ಅಧಿಕ ಜನ ಸಿಬ್ಬಂದಿಗಳು ಒಂದೆಡೆ ಕೆಲಸ ಕಳೆದುಕೊಂಡು ಇನ್ನೊಂದೆಡೆ ತಾವೇ ಪೋಷಿಸಿಟ್ಟಿದ್ದ ಪಿ.ಎಫ್ ಹಣವನ್ನು ಮರಳಿ ಪಡೆಯಲಾರದೆ ಅತ್ಯಂತ ಶೋಚನೀಯ ಪರಿಸ್ಥಿತಿಗೆ ಜಾರಿದ್ದರು. ಇದರ ಮೂಲವನ್ನು ಹುಡುಕಿದಾಗ ಸಂಸ್ಥೆಯ ಕೆಲವರೇ ವ್ಯವಸ್ಥಿತವಾಗಿ ಸಂಸ್ಥೆಯನ್ನು ಮುಚ್ಚಿ ಹಾಕಲು ಷಡ್ಯಂತ್ರ ನಡೆಸಿದ್ದರು ಎಂದು ಕಾರ್ಮಿಕರು ಆರೋಪ ಮಾಡಿದ್ದರು. ಈ ಕುರಿತಾಗಿ ನ್ಯೂಸ್ ಮಲ್ನಾಡ್ ವಿಸ್ಕೃತ ವರದಿಯನ್ನು ಮಾಡಿತ್ತು.
ಸಹಕಾರ ಸಾರಿಗೆ ಸಂಸ್ಥೆಯ ಎಂ.ಡಿ ಗಾಡ್ವಿನ್ ಜಯಪ್ರಕಾಶ್ ಕಾರ್ಮಿಕರ ಪಿ.ಎಫ್ ಹಣವನ್ನು ಕಟ್ಟದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ದೂರು ಸಲ್ಲಿಸಿದ್ದರು. ಆ ಆರೋಪದ ಅಡಿಯಲ್ಲಿ ಕೊಪ್ಪ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಗಾಡ್ವಿನ್ ಜಯಪ್ರಕಾಶ್ ಜಾಮೀನು ಪಡೆಯದ ಕಾರಣ ಮಾರ್ಚ್ 24 ರ ವರೆಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

0 Comments