ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಎಸ್ ಬೊಮ್ಮಾಯಿ ಅವರು ಇಂದು ಆಗಮಿಸಲಿದ್ದಾರೆ. ಸುಸಜ್ಜಿತ ಆಸ್ಪತ್ರೆ ಇಲ್ಲದೆ ಬಡ ಜನರು ಪ್ರಾಣ ಬಿಡುವ ಶೃಂಗೇರಿ ಕ್ಷೇತ್ರಕ್ಕೆ ಸ್ವಾಗತ ಎಂಬ ಬರಹದ ಬ್ಯಾನರ್ ಹಾಕುವ ಮೂಲಕ ವಿನೂತನವಾಗಿ ಮುಖ್ಯಮಂತ್ರಿಗಳಿಗೆ ಸಾರ್ವಜನಿಕರು ಸ್ವಾಗತ ಕೋರುವ ಮುಖಾಂತರ ತಮಗಿರುವ ಮೂಲಭೂತ ಸೌಕರ್ಯದ ಕುರಿತಾದ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ.
ನೂರು ಬೆಡ್ ಆಸ್ಪತ್ರೆ ನಿರ್ಮಾಣವಾಗಲೆಬೇಕೆಂದು ಆಗ್ರಹಿಸಿ ಈ ಹಿಂದೆ ಶೃಂಗೇರಿ ಬಂದ್ ಕೂಡ ನಡೆದಿತ್ತು ಆದರೆ ಬಂದ್ ನ ಸಮಯದಲ್ಲಿ ಬಂದ ಅಧಿಕಾರಿಗಳು ಕೇವಲ ಆಶ್ವಾಸನೆಗೆ ಸೀಮಿತರಾದರೆ ಹೊರತು ನೀಡಿದ ಭರವಸೆಯನ್ನು ಈಡೇರಿಸಲು ಈ ವರೆಗೂ ಅವರಿಂದ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಬಾಳೆಹೊನ್ನೂರಿನಲ್ಲಿ ಮುಖ್ಯಮಂತ್ರಿಗಳಿಗೆ ಸ್ವಾಗತಕೋರುವ ರೀತಿಯಲ್ಲಿ ಆಸ್ಪತ್ರೆ ಇಲ್ಲ ಎಂದು ಸಾರುವ ಬ್ಯಾನರ್ ನ ಚಿತ್ರಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಚರ್ಚೆ ನಡೆಯುವಂತೆ ಮಾಡಿದೆ.
ಎರಡು ಕಡೆಗಳಲ್ಲಿ ಹಾಕಿರುವ ಬ್ಯಾನರ್ ನಲ್ಲಿ ಈ ಎರಡು ಅಂಶಗಳು ಒಳಗೊಂಡಿದೆ.
1.ಕರುನಾಡಿನ ಮುಖ್ಯಮಂತ್ರಿಗಳಿಗೆ ಆತ್ಮೀಯ ಸ್ವಾಗತ.
ಸುಸಜ್ಜಿತ ಆಸ್ಪತ್ರೆ ಇಲ್ಲದ ವಲಯ ನಿಧಾನವಾಗಿ ಚಲಿಸಿ.
ಶೃಂಗೇರಿಯು ಸುಸಜ್ಜಿತ ಆಸ್ಪತ್ರೆ ಇಲ್ಲದ ಊರಾಗಿದ್ದು ತೀವ್ರ ತರಹದ ಅಪಘಾತ, ಅನಾರೋಗ್ಯ ಸಂಧರ್ಭದಲ್ಲಿ ಸುಮಾರು 100 ಕಿಲೋಮೀಟರ್ ದೂರದ ಆಸ್ಪತ್ರೆಗೆ ತೆರಳಬೇಕಾಗಿರುವುದರಿಂದ, ದಯವಿಟ್ಟು ತಮ್ಮ ಹಾಗೂ ನಮ್ಮ ಊರಿನವರ ಸುರಕ್ಷತೆಯ ದೃಷ್ಟಿಯಿಂದ ವಾಹನವನ್ನು ನಿಧಾನವಾಗಿ ಚಲಿಸಿ.
2.ಸುಸಜ್ಜಿತ ಆಸ್ಪತ್ರೆ ಸೌಲಭ್ಯ ಇಲ್ಲದೇ ಪ್ರತಿದಿನ ಬಡಜನರು ಪ್ರಾಣ ಬಿಡುವ ಶೃಂಗೇರಿ ಕ್ಷೇತ್ರಕ್ಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಸುಸ್ವಾಗತ.
ವಿಶ್ವ ಪ್ರಸಿದ್ಧ ಶೃಂಗೇರಿಯು ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕಾಗಿದ್ದು ಕ್ಷೇತ್ರವು 1.5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ನಮ್ಮ ಊರಿನಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ 100 ಕಿಲೋಮೀಟರ್ ದೂರ ಹೋಗಬೇಕಾಗಿದೆ.
ಈ ಭಾಗದಲ್ಲಿ ಬಹಳಷ್ಟು ಬಡವರೇ ವಾಸಿಸುವ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗದೆ "ಬಡವರಿಗೆ ಬದುಕಲು ಹಕ್ಕಿಲ್ಲ" ಎಂಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಘೋಷಿತ ಸಿದ್ದಾಂತದ ಅಡಿಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಅಂತಹ ಜನರ ಪರವಾಗಿ ನಿಮಗೆ ಆತ್ಮೀಯ ಸ್ವಾಗತ ಕೋರುತ್ತೇವೆ ಹಾಗೂ 2007ರಲ್ಲಿ ಘೋಷಣೆಯಾಗಿರುವ 100 ಬೆಡ್ ಆಸ್ಪತ್ರೆಯನ್ನು ಕಟ್ಟಿಸಿ ಇನ್ನಾದರೂ ಈ ಶಾಪದಿಂದ ಜನರು ಹೊರಬರುವಂತಾಗಲಿ ಎಂದು ಕೇಳಿಕೊಳ್ಳುತ್ತೇವೆ.
ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ಸತತ ಒಂದೂವರೆ ವರ್ಷದ ಹೋರಾಟದ ಹಾದಿ :
2007 ನೆಯ ಇಸವಿಯಲ್ಲಿ ಶೃಂಗೇರಿ ತಾಲೂಕು ಆರೋಗ್ಯ ಕೇಂದ್ರವನ್ನು 100 ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶ ಹೊರಡಿಸಿದ್ದರೂ ಕೂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗದ ಕೊರತೆಯ ನೆಪ ಹೇಳಿಕೊಂಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪೂರ್ಣ ಮಾಡಿಲ್ಲ ಕಳೆದ 2020ರ ಜೂನ್ ನಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗದ ಬೆನ್ನಲ್ಲೇ 100 ಬೆಡ್ ಆಸ್ಪತ್ರೆಹೋರಾಟ ಸಮಿತಿ ಅಕ್ಟೋಬರ್ 22ರಂದು ಶೃಂಗೇರಿ ಬಂದ್ ಮಾಡಿ ಆಕ್ರೋಶ ಹೊರಹಾಕಿತ್ತು. ಜನರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅಂದು ಶೃಂಗೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಒಂದು ತಿಂಗಳ ಒಳಗೆ ಇರುವ ಅಡೆತಡೆಗಳನ್ನು ಬಗೆಹರಿಸಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದರು ಆದರೆ ಆ ಭರವಸೆಗಳು ಇಂದಿಗೂ ಈಡೇರಿಲ್ಲ ಎಂದು ಹೋರಾಟ ಸಮಿತಿ ತಿಳಿಸಿದೆ.
ಶೃಂಗೇರಿ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಊರಾಗಿದ್ದು ಅಕ್ಕ ಪಕ್ಕದ ತಾಲೂಕಿನ ಕನಿಷ್ಟ 10 ಸಾವಿರ ಜನರಿಗೆ ಶೃಂಗೇರಿಯು ಹತ್ತಿರ ಕೇಂದ್ರವಾಗಿದೆ, ವರ್ಷಕ್ಕೆ ಸರಾಸರಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಹೀಗಿದ್ದರೂ ಕೂಡ ಈ ಕ್ಷೇತ್ರಕ್ಕೆ ಸುಸಜ್ಜಿತವಾದ ನೂರು ಬೆಡ್ ಆಸ್ಪತ್ರೆ ಇಲ್ಲದೇ ಇರುವುದು ವಿಷಾದನೀಯ ಸಂಗತಿ.
ಶೃಂಗೇರಿ ಬಂದ್ ನಂತರ ಹೊಸ ಜಾಗ ಗುರುತಿಸಿ ಮಂಜೂರಾತಿಗೆ ಕಳಿಸಲಾಗಿತ್ತು ಆದರೆ ಡೀಮ್ಡ್ ಫಾರೆಸ್ಟ್ ಹಾಗೆ ಸೆಕ್ಷನ್ 4 ಗೆ ಬರುತ್ತದೆ ಎಂದು ಅರಣ್ಯ ಇಲಾಖೆ ಅಡ್ಡಗಾಲು ಹಾಕಿದೆ. ಆದಕಾರಣ ಕಳೆದ ಕೆಲವು ತಿಂಗಳುಗಳಿಂದ ಫಾರೆಸ್ಟ್ ಕ್ಲಿಯರೆನ್ಸ್ ಪ್ರಕ್ರಿಯೆ ನಡೆಯುತ್ತಿದೆ.
ಈ ನಡುವೆ ಹೋರಾಟ ಸಮಿತಿ ಸದಸ್ಯರು ನಿರಂತರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ತೆರಳಿ ಪ್ರಕ್ರಿಯೆ ಬೇಗನೇ ಮುಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳಿಗೆ ಇದರಲ್ಲಿ ಹೆಚ್ಚಿನ ಓಟ್ ಬ್ಯಾಂಕ್ ಕಾಣಿಸುತ್ತಿಲ್ಲ ಎನಿಸುತ್ತದೆ ಹಾಗಾಗಿ ಮುತುವರ್ಜಿ ವಹಿಸಿ ಈ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.
ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಅತ್ಯಾಧುನಿಕ ಸಲಕರಣೆಗಳು ಹಾಗೂ ಸುಸಜ್ಜಿತ ಸೌಲಭ್ಯಗಳು ಇಲ್ಲದ ಕಾರಣ ತೀವ್ರ ತರಹದ ಅನಾರೋಗ್ಯ, ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ಶೃಂಗೇರಿಯಿಂದ ಸುಮಾರು 100 ಕಿ.ಮೀ ದೂರದ ಊರಿನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಬೇಕಿದೆ. ಬಹುಪಾಲು ಜನರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದರೆ ಉಳಿದವರು ಹಣದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದು 100 ಬೆಡ್ ಆಸ್ಪತ್ರೆಯ ಹೋರಾಟ ಸಮಿತಿಯು ಜನರ ಸಂಕಷ್ಟಗಳನ್ನು ವಿಸ್ಕೃತವಾಗಿ ವಿವರಿಸಿದೆ.
ಮೆಡಿಕಲ್ ಮಾಫಿಯಾ?
ಇದರ ಹಿಂದೆ ಮೆಡಿಕಲ್ ಮಾಫಿಯಾ ಒತ್ತಡ ಇರುವ ಬಗ್ಗೆಯೂ ಸಹ ಸಾಕಷ್ಟು ಅನುಮಾನವಿದೆ, ಆ ಕಾರಣಕ್ಕಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬ ಅನುಮಾನವಿದೆ ಮತ್ತು ರಾಜಕೀಯ ಒತ್ತಡ ಕೆಲಸ ಮಾಡುತ್ತಿರುವ ಸಾಧ್ಯತೆಯೂ ಇದೆ ಎಂದು ಹೋರಾಟ ಸಮಿತಿ ತಿಳಿಸಿದೆ. ಒಟ್ಟಾರೆ ಇನ್ನೂ ಶೃಂಗೇರಿಯಲ್ಲಿ ನೂರು ಬೆಡ್ ಗಳ ಆಸ್ಪತ್ರೆ ನಿರ್ಮಾಣ ಆಗದೇ ಇರುವುದು ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.

0 Comments