ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಕ್ಷೇತ್ರವಾದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರದಲ್ಲಿ ಯುವಜನತೆಗೆ ಕ್ರೀಡಾ ಕ್ಷೇತ್ರದಲ್ಲಿ ಅನುಕೂಲವಾಗುವಂತೆ ಸಮರ್ಪಕವಾದ ವ್ಯವಸ್ಥೆಯನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣಮಾಡಿಕೊಡಬೇಕೆಂದು ಶಾಸಕ ಟಿ.ಡಿ ರಾಜೇಗೌಡ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಮಲೆನಾಡು ಭಾಗವಾದ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ವರ್ಷಕ್ಕೆ ಲಕ್ಷಾಂತರ ಜನ ಪ್ರವಾಸಿಗರು ಆಗಮಿಸುತ್ತಾರೆ ಅವರು ಬಂದ ದಿನಗಳಲ್ಲಿ ಕನಿಷ್ಠ ವಾಕ್ ಮಾಡಲು ಬೇಕಾಗುವ ವ್ಯವಸ್ಥೆ ಹೊಂದಿರುವ ಮೈದಾನ ಶೃಂಗೇರಿಯಲ್ಲಿಲ್ಲ ಅಂತೆಯೇ ಕೊಪ್ಪದಲ್ಲೂ ಇಲ್ಲ, ಇಲ್ಲಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರಣದಿಂದ ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ ಎಂದರು.
ಈ ಕುರಿತು ಸರ್ಕಾರವನ್ನು ಆಗ್ರಹಿಸಿದ ಅವರು ಮಲೆನಾಡು ಭಾಗದಲ್ಲಿ ಮುಖ್ಯ ಸಮಸ್ಯೆಯಾಗಿ ತಲೆದೋರಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುವ ಸೊಪ್ಪಿನ ಬೆಟ್ಟದ ಸಮಸ್ಯೆ. ಜನರಿಗೆ ಮೂಲಭೂತವಾಗಿ ಬೇಕಾಗುವ ಅವಶ್ಯಕತೆಗಳಿಗೆ ಈ ರೀತಿಯಾಗಿ ಕಾನೂನು ಅಡ್ಡಿಬಂದಿದೆ ಎಂದರು.
ಇದನ್ನೂ ಓದಿ : ಸಾಲಬಾಧೆ ತಾಳಲಾರದೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸೇರಿಸಿಕೊಂಡು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು. ಕೇವಲ ಭಾಷಣಕ್ಕೆ ಮಾತ್ರ ಯುವಜನತೆಗೆ ಪ್ರೋತ್ಸಾಹ ನೀಡುತ್ತೇವೆ ಎನ್ನದೇ ಎಲ್ಲಾ ಕ್ಷೇತ್ರದಲ್ಲೂ ಯುವಜನತೆಗೆ ಸಹಕಾರ ನೀಡಬೇಕು ಎಂದರು.
ಇದಕ್ಕೆ ಸ್ಪಂದಿಸಿದ ಕ್ರೀಡಾ ಸಚಿವ ಕೆ.ಸಿ ನಾರಾಯಣ ಗೌಡ ಆದಷ್ಟು ಬೇಗ ಶಾಸಕರನ್ನೊಳಗೊಂಡಂತೆ ಜಿಲ್ಲಾಧಿಕಾರಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸೇರಿಸಿ ಈ ಕುರಿತು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

0 Comments