ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ತುಂಗಾ ನದಿ ಶುದ್ಧೀಕರಣ ಮಾಡುವ ಸಲುವಾಗಿ ಶೃಂಗೇರಿಯಲ್ಲಿ ಸಾರ್ವಜನಿಕರ ಸಭೆ ನಡೆಯಿತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿರುವ ಅದ್ವೈತ್ ಲ್ಯಾನ್ಸರ್ ನಲ್ಲಿ ನಡೆದ ಈ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಲುಷಿತಗೊಳ್ಳುತ್ತಿರುವ ನದಿಯನ್ನು ಶುಚಿತ್ವ ಮಾಡುವ ಸಲುವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು. 

ಇದನ್ನೂ ಓದಿ : ಅಕ್ರಮ ಕಳ್ಳಭಟ್ಟಿ ತಯಾರಿಕಾ ಅಡ್ಡೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು

ಈ ಕುರಿತು ಮಾತನಾಡಿದ ನಾಗೇಶ್ ಕಾಮತ್ ಪ್ರತಿಯೊಬ್ಬರೂ ಈ ಅಭಿಯಾನಕ್ಕೆ ಬೆಂಬಲ ನೀಡಬೇಕು. ಮುಂದಿನ ಪೀಳಿಗೆಗೆ ನದಿಯ ನೀರಿನ ಅವಶ್ಯಕತೆಯಿದೆ. ತುಂಗಾ ನದಿಯ ಸ್ವಚ್ಛತೆಗೆ ಎಲ್ಲರೂ ಸಹಕಾರ ನೀಡುವುದು ಅತ್ಯಗತ್ಯ. ಮುಂಬರುವ ದಿನಗಳಲ್ಲಿ ಎಲ್ಲರೂ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ನದಿ ಶುದ್ಧೀಕರಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು. 

ಶೃಂಗೇರಿ ಕ್ಷೇತ್ರವು ವಿಶ್ವ ಮಟ್ಟದಲ್ಲಿ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಲ್ಪಟ್ಟಿದೆ. ಗಂಗಾ ಸ್ನಾನ ತುಂಗಾ ಪಾನ ಎಂಬ ಪ್ರಸಿದ್ಧ ನಾಣ್ಣುಡಿ ಇದೆ ಆದರೆ ನದಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೇರವಾಗಿ ಕೊಳಚೆ ನೀರನ್ನು ನದಿಗೆ ಸೇರಿಸಿ ನೀರನ್ನು ಕಲುಷಿತ ಮಾಡುತ್ತಿದ್ದಾರೆ ಈ ಕುರಿತು ಹೆಚ್ಚಿನ ಆದ್ಯತೆ ನೀಡಿ ನದಿಯ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ರಜಿತ್ ಗೌಡ ಬೇಸೂರು ತಿಳಿಸಿದರು. 

ತುಂಗಾ ನದಿಯ ಶುದ್ಧೀಕರಣ ಆಗಲೇಬೇಕಿದೆ, ಅನೇಕ ಕಡೆಗಳ ಕೊಳಚೆ ನೀರು ತುಂಗಾ ನದಿಯನ್ನು ಸೇರುವುದರಿಂದ ನದಿಯ ನೀರು ಕಲುಷಿತಗೊಳ್ಳುತ್ತಿದೆ. ಸಹಸ್ರಾರು ಜನರು ಈ ನದಿಯ ನೀರನ್ನು ಕುಡಿಯುತ್ತಾರೆ ಕಲುಷಿತಗೊಂಡ ನೀರನ್ನು ಸೇವಿಸಿ ಮುಂದೆ ಅವರ ಜೀವನಕ್ಕೆ ಅಪಾಯ ಆಗಬಾರದು ಆದ ಕಾರಣ ತುಂಗಾ ನದಿಯ ನೀರನ್ನು ಶುದ್ಧೀಕರಣಗೊಳಿಸಬೇಕೆಂದು ಟಿ.ಸಿ ರಾಜೇಂದ್ರ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಮುಂಬರುವ ದಿನಗಳಲ್ಲಿ ತುಂಗಾ ನದಿಯ ಸ್ವಚ್ಛತೆಯ ಸಲುವಾಗಿ ಜನರನ್ನು ಸಂಘಟಿಸುವ ಮೂಲಕ ನದಿಯ ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು ಈ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದರು. ಈ ಸಭೆಯಲ್ಲಿ ರಜಿತ್ ಗೌಡ ಬೇಸೂರು, ಟಿ.ಸಿ ರಾಜೇಂದ್ರ, ನಾಗೇಶ್ ಕಾಮತ್, ಸುನಿಲ್ ಖಾಂಡ್ಯ ಸಂತೋಷ್ ಕಾಳ್ಯ ಉಪಸ್ಥಿತರಿದ್ದರು.