ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಪಟ್ಟಣದಲ್ಲಿರುವ ಹಳೇ ಸರ್ಕಾರಿ ಆಸ್ಪತ್ರೆಯನ್ನು ಅತ್ಯವಶ್ಯಕವಾಗಿರುವ ಹೆರಿಗೆ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಿಕೊಡಬೇಕೆಂದು ಸಾರ್ವಜನಿಕರು ಸರ್ಕಾರವನ್ನು ಹಾಗೂ ಜನ ಪ್ರತಿನಿಧಿಗಳನ್ನು ಪತ್ರಮುಖೇನ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಯು 40 ಸಾವಿರ ಜನಸಂಖ್ಯೆ ಹೊಂದಿರುವ ಊರಾಗಿದ್ದು, ಸುತ್ತಮುತ್ತಲಿನ ಊರುಗಳ, ಬೇರೆ ರಾಜ್ಯಗಳ ಹಾಗೂ ವಿದೇಶಗಳ ಪ್ರವಾಸಿಗರು ಕೂಡ ವರ್ಷವಿಡೀ ಭೇಟಿ ನೀಡುತ್ತಾರೆ. ಇಂತಹ ಕ್ಷೇತ್ರದಲ್ಲಿ ಜನರಿಗೆ ಮೂಲಭೂತವಾಗಿ ಅವಶ್ಯಕವಾಗಿರುವ ಹಾಗೂ ಅತ್ಯಗತ್ಯವಾಗಿರುವ ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆಯನ್ನು ಶೃಂಗೇರಿ ಪಟ್ಟಣದ ಮಧ್ಯ ಭಾಗದಲ್ಲಿರುವ ಪ್ರಸ್ತುತ ಯಾವುದೇ ಉದ್ದೇಶಕ್ಕೆ ಬಳಸದೇ ಇರುವ ಹಳೇ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿ ನಿರ್ಮಾಣ ಮಾಡಿಕೊಡಬೇಕೆಂದು ಶೃಂಗೇರಿಯ ಗ್ರಾಮಸ್ಥರು ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.

ಊರಿಗೆ ಆಸ್ಪತ್ರೆಯ ಅಗತ್ಯತೆ ಹೆಚ್ಚಿದ್ದು, ಮೂಲಭೂತವಾಗಿ ಆಸ್ಪತ್ರೆಯು ಎಲ್ಲರಿಗೂ ಅನಿವಾರ್ಯವಾಗಿರುವ ಕಾರಣ ಈ ಕುರಿತು ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಶೃಂಗೇರಿಯ ಸಾರ್ವಜನಿಕರು ಕೋರಿದ್ದಾರೆ. 

ಇನ್ನೂ ಈಡೇರದ ನೂರು ಬೆಡ್ ಆಸ್ಪತ್ರೆ ನಿರ್ಮಾಣದ ಭರವಸೆ :

ಶೃಂಗೇರಿಯಲ್ಲಿ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಆಗಬೇಕೆಂದು ಆಗ್ರಹಿಸಿ ಈ ಹಿಂದೆ ಶೃಂಗೇರಿ ಬಂದ್ ಕೂಡ ನಡೆದಿತ್ತು ಅಂದು ಸ್ಥಳಕ್ಕಾಗಮಿಸಿದ್ದ ಎ.ಸಿ ಹಾಗೂ ನಂತರದಲ್ಲಿ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಒಂದು ತಿಂಗಳ ಒಳಗೆ ಇರುವ ಅಡೆ ತಡೆಗಳನ್ನು ಪರಿಹರಿಸಿ ಆಸ್ಪತ್ರೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಇನ್ನೂ ಪ್ರಕ್ರಿಯೆ ನಡೆಯುತ್ತಿದೆಯೇ ಹೊರತು ಇನ್ನೂ ತಾರ್ಕಿಕ ಹಂತಕ್ಕೆ ತಲುಪಿಲ್ಲ, ಈಗ ಗುರುತಿಸಿದ ಜಾಗವು ಗೋಮಾಳ ಭೂಮಿಯಾಗಿದ್ದರೂ ಸಹ ಹಿಂದಿನ ಜಿಲ್ಲಾಧಿಕಾರಿಯೋರ್ವರು ಹಾಗೂ ಅರಣ್ಯ ಇಲಾಖೆಯ ಎಡವಟ್ಟಿನಿಂದ ಡೀಮ್ಡ್ ಫಾರೆಸ್ಟ್ ಗೆ ಸೇರಿದೆ. ಆದಕಾರಣ ಫಾರೆಸ್ಟ್ ಕ್ಲಿಯರೆನ್ಸ್ ನೆಪವೊಡ್ಡಿ ಇನ್ನೂ ಜಾಗಕ್ಕೆ ಮಂಜೂರಾತಿ ದೊರಕಿಲ್ಲ. ನೂರಾರು ಎಕರೆ ಒತ್ತುವರಿ ಮಾಡಿಕೊಂಡಿರುವವರ ಬಗ್ಗೆ ಗೊತ್ತೂ ಗೊತ್ತಿಲ್ಲದಂತೆ ಇರುವ ಅರಣ್ಯ ಇಲಾಖೆಯ ಅಧಿಕಾರಿಗಳು ಊರಿನ ಆಸ್ಪತ್ರೆ ಉದ್ಧೇಶಕ್ಕೂ ಕಾನೂನಿನ ನೆಪವೊಡ್ಡಿ ಅಡ್ಡಗಾಲು ಹಾಕುವುದು ಜನರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸಾರ್ವಜನಿಕರು ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.