ಕೊಡಗು : (ನ್ಯೂಸ್ ಮಲ್ನಾಡ್ ವರದಿ) ದೇಶಾದ್ಯಂತ ಸಂಚಲನ ಮೂಡಿಸಿರುವ ಕಾಶ್ಮೀರಿ ಪಂಡಿತರು ಕಾಶ್ಮೀರದಲ್ಲಿ ಅನುಭವಿಸಿದ ಹಿಂಸೆ, ಶಿಕ್ಷೆ, ಕರಾಳತೆಗಳ ಚಿತ್ರವಾದ ದಿ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಎರಡು ದಿನಗಳ ಕಾಲ ಯಾವುದೇ ಹಣ ಪಡೆಯದೇ ಫ್ರೀ ಶೋ ಪ್ರದರ್ಶನ ನಡೆಸುವುದಾಗಿ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಘೋಷಣೆ ಮಾಡಿದ್ದಾರೆ. 

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರ್!!  ಚಾರ್ಮಾಡಿ ಘಾಟ್ ನ ಮೊದಲನೇ ತಿರುವಿನಲ್ಲಿ ಘಟನೆ

ಕಾಶ್ಮೀರದಲ್ಲಿ ಈ ಹಿಂದೆ ಕಾಶ್ಮೀರಿ ಪಂಡಿತರಮೇಲಾದ ಹಿಂಸಾಚಾರ ಅವರು ಅನುಭವಿಸಿದ ನೋವು ಮತ್ತು ಕಾಶ್ಮೀರಿ ಪಂಡಿತರ ಮಾರಣ ಹೋಮದ ಕುರಿತು ಸವಿಸ್ತಾರವಾಗಿ ಈ ಚಿತ್ರದಲ್ಲಿ ಬಿತ್ತರಿಸಲಾಗಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಫ್ರೀ ಶೋ ನಡೆಸಲಾಗುವುದು ಮತ್ತು ತಗಲುವ ಖರ್ಚು ವೆಚ್ಚವನ್ನು ಖುದ್ದಾಗಿ ಶಾಸಕರೇ ಭರಿಸುವುದಾಗಿ ತಿಳಿಸಿದ್ದಾರೆ.

ಕೊಡಗಿನ ಸುಂಟಿಕೊಪ್ಪ ಗಣೇಶ್ ಚಿತ್ರಮಂದಿರದಲ್ಲಿ ದಿನಾಂಕ 15 ಮಾರ್ಚ್ 2022 ಹಾಗೂ 16 ರಂದು ಎರಡು ದಿನಗಳ ಕಾಲ ಉಚಿತ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಎರಡೂ ದಿನ ಬೆಳಗ್ಗೆ 10 ಗಂಟೆಗೆ, ಮಧ್ಯಾಹ್ನ 02 ಗಂಟೆಗೆ, ಸಂಜೆ 05 ಗಂಟೆಗೆ ಹಾಗೂ ರಾತ್ರಿ 08 ಗಂಟೆಯಂತೆ ದಿನಕ್ಕೆ ನಾಲ್ಕು ಪ್ರದರ್ಶನಗಳಿದ್ದು, ಪ್ರತಿ ಪ್ರದರ್ಶನದಲ್ಲಿ 250 ಆಸನ ವ್ಯವಸ್ಥೆಗಳಿದ್ದು ಆಸಕ್ತರು ಸ್ಥಳದಲ್ಲೇ ಉಚಿತ ಟಿಕೆಟ್ ಪಡೆಯಬಹುದು ಎಂದು ತಿಳಿಸಿದ್ದಾರೆ.

ಶಾಸಕರ ಈ ಕಾರ್ಯಕ್ಕೆ ಕೊಡಗಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಚಿತ್ರವನ್ನು ನೋಡಿ ಎಲ್ಲರೂ ಚರಿತ್ರೆಯ ಕುರಿತು ಹಾಗೂ ನಡೆದ ಘಟನೆಯ ಕುರಿತು ವಿಚಾರ ಅರಿತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.