ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ನಗರಸಭಾ ಅಧಿಕಾರಿಗಳು ದಾಳಿ ನಡೆಸಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ನಗರದ ಸಂತೆ ಮೈದಾನದ ಹೋಟೆಲ್ ಒಂದರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿದ್ದ ವಿಚಾರ ನಗರಸಭೆ ಅಧಿಕಾರಿಗಳಿಗೆ ತಿಳಿದುಬಂದಿದ್ದು ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳ ನೆರವು ಪಡೆದು, ಹೋಟೆಲ್ ಗೆ ಧಾವಿಸಿದ್ದಾರೆ.
ನಗರಸಭೆಯು ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಹಾಗೂ ಸುಂದರ ಚಿಕ್ಕಮಗಳೂರು ನಗರ ನಿರ್ಮಾಣದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗೋಮಾಂಸ ಮಾರಾಟವು ಅಕ್ರಮವಾಗಿರುವ ಹಿನ್ನೆಲೆ ಈ ಕುರಿತು ದಾಳಿ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳನ್ನು ನಗರಸಭೆ ಎಂದಿಗೂ ಸಹಿಸುವುದಿಲ್ಲ - ವರಸಿದ್ಧಿ ವೇಣುಗೋಪಾಲ್, ನಗರಸಭೆ ಅಧ್ಯಕ್ಷರು.
ಹೋಟೆಲಿನಲ್ಲಿ ಗೋಮಾಂಸವಿರುವುದು ಖಚಿತ ಪಟ್ಟ ಹಿನ್ನೆಲೆ ಅಧಿಕಾರಿಗಳು ಹೋಟೆಲನ್ನು ಸೀಜ್ ಮಾಡಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಈ ಕುರಿತು ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಅತಿಶೀಘ್ರವಾಗಿ ನಾವು ಹಾಕಿದ ಯೋಜನೆಗಳನ್ನೆಲ್ಲ ಕೈಗೆತ್ತಿಕೊಳ್ಳುತ್ತಿದ್ದೇವೆ ಅಂತೆಯೇ ಗೋಮಾಂಸ ನಿಷೇಧ ಮಾಡುವುದು ನಮ್ಮ ದೃಢಸಂಕಲ್ಪವಾಗಿದೆ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ಎಲ್ಲಾ ಜಾಗಗಳಲ್ಲೂ ಗೋಮಾಂಸ ಮಾರಾಟ ನಿಷೇಧ ಮಾಡಲಾಗುವುದು ಎಂದರು.
ಈ ಕಾರ್ಯಾಚರಣೆಯಲ್ಲಿ ನಗರಸಭೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.

0 Comments