ಹಾಸನ : (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ದುರ್ಮರಣವನ್ನಪ್ಪಿದ್ದಾರೆ.

ಇದನ್ನೂ ಓದಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಸೆರೆಹಿಡಿದ ಪೊಲೀಸರು

ಹಾಸನ ಜಿಲ್ಲೆಯ ಬೇಲೂರು ರಸ್ತೆಯ ಸಂಕೇನಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿಯಾದ ಪರಿಣಾಮ ಕಾರಿನಲ್ಲಿದ್ದ ಐವರೂ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 

ಮೃತಪಟ್ಟವರನ್ನು ಬೇಲೂರು ಮೂಲದವರೆಂದು ಗುರುತಿಸಲಾಗಿದ್ದು ಎಲ್ಲಾ ಮೃತದೇಹಗಳನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಮೃತರನ್ನು ಹಸನ್ (20) ಅಕ್ಮಲ್(19), ಜಿಲಾನಿ (19), ತೋಯಿದ್ (18), ಕೈಫ್ (18) ಎಂದು ಗುರುತಿಸಲಾಗಿದೆ.

ಈ ಭೀಕರ ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು, ಪೊಲೀಸರು ವಾಹನ ಸವಾರರು ಕಾರಿನಲ್ಲಿದ್ದವರನ್ನು ಹೊರತೆಗೆಯಲು ಬಹಳಷ್ಟು ಪ್ರಯತ್ನಪಟ್ಟಿದ್ದಾರೆ ಆದರೆ ಕಾರು ಸಂಪೂರ್ಣ ಜಖಂ ಆದ ಕಾರಣ ಕಾರಿನಲ್ಲಿದ್ದವರನ್ನು ಹೊರತೆಗೆಯಲು ಹರಸಾಹಸವನ್ನೇ ಸ್ಥಳೀಯರು ಮಾಡಿದ್ದಾರೆ. ಮೃತಪಟ್ಟವರೆಲ್ಲರೂ ಯುವಕರೇ ಆಗಿದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರಂತೂ ಅತ್ಯಂತ ದುಃಖದಲ್ಲಿದ್ದಾರೆ. ಅಪಘಾತವಾದ ಜಾಗದಲ್ಲಿ ಹೆಚ್ಚಿನ ರಕ್ತದ ಕಲೆಗಳಿದ್ದು ಅಪಘಾತ ಹೊಂದಿದ ಆಲ್ಟೊ ಕಾರ್ ಸಂಪೂರ್ಣ ಜಖಂಗೊಂಡಿದೆ.