ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಸಮಾಜವನ್ನು ಒಂದೆಡೆ ಸ್ವಾಸ್ಥ್ಯದಿಂದ ಕೊಂಡೊಯ್ಯಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ಬಿಜೆಪಿ ನಾಯಕರು ಜನತೆಯಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಡೀ ಸಮಾಜವನ್ನು ಅತ್ಯಂತ ಯಶಸ್ವಿಯಾಗಿ ಯಾವುದೇ ಗೊಂದಲಮಯ ಅಥವಾ ಅಹಿತಕರ ವಾತಾವರಣ ನಿರ್ಮಾಣವಾಗದಂತೆ ಒಂದೆಡೆ ಸ್ವಾಸ್ಥ್ಯ ಸಂಕಲ್ಪದ ಜೊತೆಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ಬಿಜೆಪಿ ಪಕ್ಷದ ನಾಯಕರು ಈ ವಿಚಾರದಲ್ಲಿ ವಿಫಲರಾಗಿದ್ದಾರೆ, ಅವರೇ ಸಮಾಜದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವಿಕೆಯ ವಿಚಾರದಿಂದ ಆರಂಭವಾದ ಈ ಗೊಂದಲಗಳು ವ್ಯಾಪಾರಕ್ಕೆ ನಿರ್ಬಂಧ ಹೇರುವ ಮಟ್ಟಕ್ಕೆ ಬಂದು ತಲುಪಿದೆ ಇದು ಸಮಾಜವನ್ನು ಬೇರ್ಪಡಿಸುತ್ತಿದೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ,ಬೆಲೆಏರಿಕೆ ನಿರುದ್ಯೋಗ ಮುಂತಾದ ಮೂಲಭೂತ ಸಮಸ್ಯೆಗಳಿಂದ ರಾಜ್ಯದ ಜನ ಬಳಲುತ್ತಿದ್ದಾರೆ ಆದರೆ ಪ್ರಸ್ತುತ ಈ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಜನರ ಬದುಕಿನ ಜೊತೆಗೆ ಆಟವಾಡುತ್ತಿದೆ ಎಂದರು. 

ಪೊಲೀಸ್ ಠಾಣೆಯಲ್ಲಿ ಕೇವಲ ಬಿಜೆಪಿಗರು ಮಾತ್ರ ದೂರು ದಾಖಲಿಸಿದರೆ ಪ್ರಕರಣ ದಾಖಲು ಮಾಡುತ್ತಾರೆಯೇ ಹೊರತು ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಸರಿಯಾದ ಸಹಕಾರ ನೀಡುತ್ತಿಲ್ಲ. ಕೇವಲ ಬಿಜೆಪಿಗರ ಮಾತು ಕೇಳುವ ಪೊಲೀಸರು ಅವರ ಕೇಸರಿ ಸಮವಸ್ತ್ರ ಧರಿಸಲಿ ಎಂದು ವಾಗ್ದಾಳಿ ನಡೆಸಿದರು. ಗೃಹ ಸಚಿವರ ತವರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ, ಪರವಾನಿಗೆ ಇಲ್ಲದೆ ಲಕ್ಷಾಂತರ ರೂಪಾಯಿ ಹಣದ ಮರಳು ಗಣಿಗಾರಿಕೆಗೆ ಬ್ರೇಕ್ ಬೀಳಬೇಕಿದೆ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಕೆಪಿಸಿಸಿ ಸದಸ್ಯ ಜಿ.ಎಸ್ ನಾರಾಯಣ್ ರಾವ್, ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಬನಮ್, ಸೇರಿದಂತೆ ಕಾಂಗ್ರೆಸ್ ನ ಅನೇಕ ಮುಖಂಡರು ಉಪಸ್ಥಿತರಿದ್ದರು.