ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕಿಡಿಗೇಡಿ ಯುವಕನೋರ್ವ ಪೊಲೀಸ್ ಸಿಬ್ಬಂದಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರ್ಘಟನೆ ಕೊಪ್ಪದಲ್ಲಿ ನಡೆದಿದೆ.
ಇದನ್ನೂ ಓದಿ : ಹಿಂದೂ-ಮುಸ್ಲಿಂ ಎಲ್ಲರೂ ಸಮಾನರು, ಹೈಕೋರ್ಟ್ ತೀರ್ಪು ಸ್ವಾಗತಾರ್ಹ; ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಗೆ ಗ್ರಾಮದ ಜಂಬೇಕಾಡಿನಲ್ಲಿ ಈ ದುರ್ಘಟನೆ ನಡೆದಿದ್ದು 25 ವರ್ಷ ಪ್ರಾಯದ ಯುವಕ ದೇವರಾಜ್ ಎಂಬಾತ ಈ ಹಿಂದಿನಿಂದಲೂ ಮನೆಯವರ ಜೊತೆಗೆ ಜಗಳ ನಡೆಸುತ್ತಿರುತ್ತಾನೆ. ಅಂತೆಯೇ ಇಂದೂ ಕೂಡ ಮನೆಯವರ ಜೊತೆಗೆ ಜಗಳವಾಡಿದ್ದು ಜಗಳ ವಿಕೋಪಕ್ಕೆ ತಿರುಗಿದೆ. ಈತನು ಅವರು ವಾಸವಿದ್ದ ಮನೆಗೇ ಬೆಂಕಿ ಹಚ್ಚಿದ್ದಾನೆ. ಕೂಡಲೇ ಅಲ್ಲಿನ ಸ್ಥಳೀಯರು 112 ವಾಹನಕ್ಕೆ ಕರೆ ಮಾಡಿದ್ದಾರೆ.
ರಕ್ಷಣೆಗೆಂದು ಧಾವಿಸಿದ 112 ವಾಹನದ ಚಾಲಕನ ಮೇಲೂ ಈತ ತನ್ನ ಕೋಪ ತೋರಿಸಿದ್ದು ಆತನ ಕಾಲಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ಅವರ ರಕ್ಷಣೆಗೆ ಧಾವಿಸಿದ ಜಗದೀಶ್ ಎಂಬುವವರು ಸ್ವತಃ ಅವರೇ 112 ವಾಹನವನ್ನು ಚಾಲನೆ ಮಾಡಿಕೊಂಡು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಜಗದೀಶ್ ಅವರ ಸಮಯಪ್ರಜ್ಞೆಯಿಂದ ಚಾಲಕ ಪ್ರಸ್ತುತ ಸುರಕ್ಷಿತವಾಗಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯಗಳು ಇಲ್ಲ. ನಂತರದಲ್ಲಿ ಸೇರಿದ ಗ್ರಾಮಸ್ಥರು ಆತನನ್ನು ಮರಕ್ಕೆ ಕಟ್ಟಿ ಹಾಕಿದ್ದರು. ತಮ್ಮ ಸಿಬ್ಬಂದಿಯ ಆರೋಗ್ಯದ ಕುರಿತು ಕಾಳಜಿಹೊಂದಿದ್ದ ಎಎಸ್ಸೈ ಶ್ರೀನಾಥ್ ರೆಡ್ಡಿ ಅವರು ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಸಿಬ್ಬಂದಿಯ ಯೋಗಕ್ಷೇಮದ ಕುರಿತು ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.

0 Comments