ಕುದುರೆಮುಖ : (ನ್ಯೂಸ್ ಮಲ್ನಾಡ್ ವರದಿ) ಕುದುರೆಮುಖದ ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ಸಕ್ರಿಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅವರ ಮೇಲೆ ಸೂಕ್ತವಾದ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಗೃಹ ಸಚಿವ ಆರಗಜ್ಞಾನೇಂದ್ರ ಅವರನ್ನು ಕೋರಿದ್ದಾರೆ.
ಇದನ್ನೂ ಓದಿ : ಕಳಸ : ಮೊಬೈಲ್ ಶಾಪ್ ನಲ್ಲಿ ಮೊಬೈಲ್ ಕಳ್ಳತನ ನಡೆಸಿದ್ದ ಚಾಲಾಕಿ ಕಳ್ಳ ಅಂದರ್
ನಿನ್ನೆ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಆಗಮಿಸಿದ್ದ ಗೃಹ ಸಚಿವ ಆರಗಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಕುದುರೆಮುಖ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸರ್ಕಲ್ ಇನ್ಸ್ಪೆಕ್ಟರ್ ಅವರಿಂದ ತಮಗಾಗುತ್ತಿರುವ ಸಮಸ್ಯೆಯನ್ನು ಹೇಳಿಕೊಂಡರು.
ನ್ಯಾಯಕ್ಕಾಗಿ ಠಾಣೆಗೆ ಹೋದರೆ ಜನರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ, ಭ್ರಷ್ಟಾಚಾರ ಯಾರ ಭಯವಿಲ್ಲದೇ ನಡೆಯುತ್ತಿದೆ, ಕಳಸ, ಹೊರನಾಡು, ಕುದುರೆಮುಖ ಸುತ್ತಮುತ್ತಲಿನ ಹೋಂ ಸ್ಟೇ ಗಳಿಗೆ ತಿಂಗಳ ಮಾಮೂಲಿ ಹಣ ನಿಗದಿಮಾಡಿ ನೀಡದವರ ಮೇಲೆ ಪ್ರಕರಣ ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸಾರ್ವಜನಿಕರು ಮಾಡಿದ್ದಾರೆ.
ಇದಲ್ಲದೇ ಚಹಾ ಫ್ಯಾಕ್ಟರಿಗೆ ತೆರಳಿ ಅಲ್ಲಿನ ವ್ಯವಸ್ಥಾಪಕರಿಗೆ ಗದರಿಸಿ ಟೀ ಮೂಟೆಯನ್ನು ಜೀಪ್ ಗೆ ಹಾಕಿಕೊಂಡು ತೆರಳಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ, ಇನ್ನು ಗೂಗಲ್ ಪೇ ಫೋನ್ ಪೇ ಮುಖಾಂತರ ಲಂಚ ಸ್ವೀಕಾರ ಮಾಡಿರುವ ಕುರಿತು ಲಿಖಿತವಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಒಂದು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ ಈ ಕುರಿತು ಹೆಚ್ಚಿನ ಗಮನವಹಿಸಿ ಪೊಲೀಸ್ ಅಧಿಕಾರಿಗೆ ಶಿಕ್ಷೆಯಾಗುವಂತೆ ಮಾಡಬೇಕೆಂದು ಸಾರ್ವಜನಿಕರು ಗೃಹ ಸಚಿವ ಆರಗಜ್ಞಾನೇಂದ್ರ ಅವರನ್ನು ಕೋರಿದ್ದಾರೆ.
ಹದಿನೈದು ದಿನಗಳ ಗಡುವು :
ಮುಂದಿನ ಹದಿನೈದು ದಿನಗಳಲ್ಲಿ ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಹೋದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಪೊಲೀಸ್ ಠಾಣೆಗೆ ದಾನವಾಗಿ ಕಾಣಿಕೆ ಹುಂಡಿ ನೀಡುವುದಾಗಿ ತಿಳಿಸಿದ್ದಾರೆ. ನಂತರದಲ್ಲಿ ರಸ್ತೆ ತಡೆ ನಡೆಸುವ ಎಚ್ಚರಿಕೆಯನ್ನೂ ಗ್ರಾಮಸ್ಥರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮನವಿ ನೀಡುವ ಸಂದರ್ಭದಲ್ಲಿ ಸಂಸೆ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಸೇರಿದಂತೆ ಅನೇಕರು ಹಾಜರಿದ್ದರು.

0 Comments