ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇಂದು ಬೆಳಿಗ್ಗೆ ವಿವಾದಿತ ಜಾಗದ ತೆರವಿಗೆ ಸರ್ವೇ ಮಾಡಲು ಚಿಕ್ಕಮಗಳೂರು ನಗರಸಭೆಯ ವತಿಯಿಂದ ನಡೆದ ಕಾರ್ಯಾಚರಣೆಯಿಂದ ಇಂದು ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಠದಮನೆ ನಲ್ಲೂರುವಿನ ಎನ್.ಎಂ ದಿವಾಕರ್ ಎಂಬುವವರು ಬಸವನಹಳ್ಳಿ ರಸ್ತೆಯ ಬಡಾಮಕಾನ್(ಹಜರತ್ ಸೈಯದ್ ಮಯ಼ರ್ ಖಾಖಾದ್ರಿ ದರ್ಗಾ) ಇರುವ ಜಾಗದಲ್ಲಿ ತಮ್ಮ ಜಾಗ ಇರುವುದಾಗಿಯೂ, ಅದಕ್ಕೆ ಸಮರ್ಪಕವಾದ ದಾಖಲೆ ಇರುವುದಾಗಿಯೂ, ತಮ್ಮ ಜಾಗವನ್ನು ಹದ್ದುಬಸ್ತು ಮಾಡಿಕೊಡಬೇಕೆಂದು ನಗರಸಭೆಗೆ ಮನವಿ ಮಾಡಿದ್ದರು.
ಅದರಂತೆ ನಗರಸಭೆಯಿಂದ ದಿವಾಕರ್ ಹಾಗೂ ಜಾಮಿಯಾ ಮಸೀದಿ ಟ್ರಸ್ಟ್ ಗೆ ನೋಟಿಸ್ ನೀಡಿ ತಮ್ಮಲ್ಲಿರುವ ದಾಖಲೆಗಳನ್ನು ತರುವಂತೆ ಸೂಚಿಸಲಾಗಿತ್ತು. ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಯಿತು ಈ ಸಂದರ್ಭದಲ್ಲಿ ಸಹ ನಗರಸಭೆ ಅಧ್ಯಕ್ಷರು ಹಾಗೂ ಮುಸ್ಲಿಂ ಕಮಿಟಿಯವರೊಂದಿಗೆ ವಾದ ವಿವಾದ ಉಂಟಾಗಿತ್ತು. ಆ ನಂತರ ಜಾಗದ ಸರ್ವೇ ಮಾಡಲು ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿತು ಆದರೆ ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ನಾಯಕರು ಹಾಗೂ ಬೆಂಬಲಿಗರು ಈ ಸ್ವತ್ತಿನ ವಿಚಾರ ಹೈಕೋರ್ಟ್ ನಲ್ಲಿ ಇರುವ ಕಾರಣ ಅಧಿಕಾರಿಗಳು ಸರ್ವೇ ಮಾಡುವುದು ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಗರಸಭೆಯ ಸದಸ್ಯ ಶಬಾದ್, ಮುಸ್ಲಿಂ ಸಮುದಾಯದ ಮುಖಂಡರು, ಜಾಮಿಯಾ ಮಸೀದಿ ಆಡಳಿತ ಸಂಸ್ಥೆಯವರು, ಮುಸ್ಲಿಂ ಸಮುದಾಯದವರು ಈ ಕುರಿತು ಪ್ರತಿಭಟನೆ ನಡೆಸಿದರು ಹಾಗೂ ನಗರಸಭೆಯ ನಿರ್ಣಯ ಸರಿಯಲ್ಲ ಎಂದು ಆರೋಪಿಸಿದರು.
ಇನ್ನೊಂದೆಡೆ ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂಪರ ಕಾರ್ಯಕರ್ತರು ಸಹ ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡು ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಂತರ ಖಾಲಿ ಜಾಗದ ಗೇಟಿನ ಬೀಗ ಒಡೆದು ಒಳಹೋದ ನಗರಸಭೆಯ ಸಿಬ್ಬಂದಿಗಳು ಬೆಳೆದಿದ್ದ ಹುಲ್ಲುಗಳನ್ನು ಕಟಾವು ಮಾಡುವ ಪ್ರಕ್ರಿಯೆಯನ್ನು ಮಾಡಿದರು. ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಈ ಎಲ್ಲಾ ಕಾರ್ಯಗಳು ನಡೆಯಿತು, ಚಿಕ್ಕಮಗಳೂರಿನ ಬಸವನಹಳ್ಳಿ ಕಡೆಯಿಂದ ಮಕಾನ್ ಸಂಪರ್ಕಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಗಳ ಅಳವಡಿಕೆ ಮಾಡಲಾಗಿತ್ತು, ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಬಂದೋಬಸ್ತ್ ವಹಿಸಿದ್ದರು.
ಏನಿದೆ ವಿವಾದದ ಇತಿಹಾಸ: ಇದು ಸುಮಾರು 1965ನೇ ಇಸವಿಯಿಂದ ನಡೆದುಕೊಂಡು ಬರುತ್ತಿರುವ ವಿವಾದವಾಗಿದೆ, 2015 ರಿಂದ ಇದೇ ಜಾಗದ ವಿವಾದದ ಕುರಿತು ಕಾನೂನು ಹೋರಾಟ ನಡೆದು 2017ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಈ ಜಾಗವು ಮಠದ ಮನೆ ನಲ್ಲೂರು ಗೆ ಸೇರಿದ್ದೆಂದು ಆದೇಶಿಸಿತ್ತು ಎಂದು ಮಠದ ಮನೆ ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಈ ಆದೇಶ ಪ್ರಶ್ನಿಸಿ ಮಸೀದಿ ಕಮಿಟಿ ಹೈಕೋರ್ಟ್ ಮೆಟ್ಟಿಲೇರಿತ್ತು.
"ನಮ್ಮ ಬಳಿ ಎಲ್ಲಾ ದಾಖಲೆಗಳಿವೆ, ನಮ್ಮ ಜಾಗ ಪಡೆಯಲು ಇಷ್ಟು ವರ್ಷಗಳಿಂದ ಹೋರಾಡುತ್ತಿದ್ದೇವೆ, ಈ ಹಿಂದೆ ಕೋರ್ಟ್ ನಲ್ಲಿಯೂ ನಮ್ಮ ಪರ ತೀರ್ಪು ಬಂದಿದೆ. ಮುಂದೆಯೂ ನ್ಯಾಯಕ್ಕಾಗಿ ಹೋರಾಡುತ್ತೇವೆ, ಮಸೀದಿ ಕಮಿಟಿಯವರ ಬಳಿ ಯಾವುದೇ ಪೂರಕ ದಾಖಲೆಗಳಿಲ್ಲ. ಆದರೂ ಅನವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ. ನಾವು ನಮ್ಮ ದಾಖಲೆ ಸಲ್ಲಿಸಿದ್ದೇವೆ, ಅಷ್ಟಿದ್ದರೆ ಮಸೀದಿ ಕಮಿಟಿಯವರು ಸಹ ದಾಖಲೆ ಸಲ್ಲಿಸಲಿ". - ಮಿಥುನ್, ಮಠದ ಮನೆ ನಲ್ಲೂರು ಕುಟುಂಬದವರು.
ಇನ್ನೊಂದೆಡೆ ಮಸೀದಿ ಕಮಿಟಿಯವರು ಹೇಳಿಕೆ ನೀಡಿದ್ದು, ಯಾರೇ ಆಗಲಿ ನಮ್ಮ ಜಾಗ ಎಂದಾದಲ್ಲಿ ನ್ಯಾಯಾಲಯದಲ್ಲಿ ಸಾಬಿತುಪಡಿಸಲಿ. ಈ ರೀತಿಯಲ್ಲಿ ಏಕಾಏಕಿ ಬಂದು ಜಾಗವನ್ನು ಸರ್ವೇ ಮಾಡುವುದು ಸರಿಯಲ್ಲ. ನಮಗೆ ಸರ್ವೇ ದಾಖಲೆಗಳ ಮೇಲೆಯೂ ಅನುಮಾನ ಇದೆ ಎಂದರು






0 Comments