ಹೊರನಾಡು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ತಪ್ಪಲಿನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹದ ನೋಂದಣಿ ಆರಂಭವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಕ್ಷೇತ್ರವಾದ ಹೊರನಾಡಿನಲ್ಲಿ ಈ ಬಾರಿಯ 50 ಜೋಡಿಗೆ ಸಾಮೂಹಿಕ ವಿವಾಹ ನಡೆಸಲು ದೇವಸ್ಥಾನ ಮಂಡಳಿಯು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಮೊದಲು ನೊಂದಾಯಿಸುವ 50 ಜೋಡಿಗೆ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದ್ದು ವಿವಾಹವಾಗಲಿಚ್ಚಿಸುವ ವಧು-ವರರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಮೇ 12ನೇ ತಾರೀಖಿನ ಒಳಗೆ ಸಲ್ಲಿಸಬೇಕೆಂದು ಸೂಚಿಸಿದೆ.
ದಾನ ಧರ್ಮಗಳಿಗೆ ಹೆಸರಾಗಿರುವ ಪವಿತ್ರ ಕ್ಷೇತ್ರವು ಕಳೆದ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರುತ್ತಿದ್ದು ಸಮಾಜದ ಉನ್ನತಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ನಂಬರ್ ನ್ನು ಸಂಪರ್ಕಿಸಿ 9448282410 / 9448282424
ಹರಿಹರಪುರ ಶ್ರೀ ಮಠದಲ್ಲಿ ಐತಿಹಾಸಿಕ ಮಹಾ ಕುಂಭಾಭಿಷೇಕ :
ಹರಿಹರಪುರ : ಕಳೆದ 12 ದಿನಗಳಿಂದ ಹರಿಹರಪುರ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್ ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಇಂದೂ ಕೂಡ ಧಾರ್ಮಿಕ ಕಾರ್ಯಗಳು ನೆರವೇರಿತು.
ಇಂದು ಶ್ರೀ ಮಠದಲ್ಲಿ ಸಹಸ್ರ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಕೋಟಿ ಕುಂಕುಮಾರ್ಚನೆಯ ಮಂಗಲೋತ್ಸವ ಹಾಗೂ ಜಗದ್ಗುರು ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾ ಸ್ವಾಮಿಗಳು ಭಕ್ತರಿಗೆ ಆಶೀರ್ವಚನ ನೀಡಿದರು.
ಇಂದು ಶ್ರೀ ಮಠಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ತೇಜಸ್ವಿ ಸೂರ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ದೇವರ ದರ್ಶನ ಪಡೆದು ಶ್ರೀಗಳ ಕೃಪೆಗೆ ಪಾತ್ರರಾದರು. ನಿನ್ನೆ ಶ್ರೀ ಮಠಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಆಗಮಿಸಿದ್ದರು ಈ ಸಂದರ್ಭದಲ್ಲೂ ಕೂಡ ಅನೇಕರು ಉಪಸ್ಥಿತರಿದ್ದರು.
ನಿನ್ನೆ ಹಾಗೂ ಇಂದು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮಠದ ಆವರಣದಲ್ಲಿ ನಡೆದಿದ್ದು ನಾಳೆ ದಿನಾಂಕ 23 ಏಪ್ರಿಲ್ 2022 ರ ಶನಿವಾರದಂದು ರುದ್ರಹೋಮ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣೋತ್ಸವ ನಡೆಯಲಿದೆ. ಇಂದು ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿದ್ದು ಬರುವ ಯಾತ್ರಾರ್ಥಿಗಳಿಗೆ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಶ್ರೀ ಮಠದ ವತಿಯಿಂದ ಕಲ್ಪಿಸಲಾಗಿತ್ತು.
ಇಂದು ಭಕ್ತಾದಿಗಳಿಗೆ ಆಶೀರ್ವಚನ ನೀಡಿದ ಶ್ರೀಗಳು ಶ್ರೇಷ್ಟತೆಯನ್ನು ಸಮರ್ಪಣೆ ಹಾಗೂ ಜ್ಞಾನದ ಮೂಲಕ ಪಡೆಯಬಹುದು ಹಿಂದೂ ಸನಾತನ ಧರ್ಮದ ಮಹತ್ವವನ್ನು ಇಡೀ ವಿಶ್ವಕ್ಕೇ ಸಾರಬೇಕು. ಮನುಜರು ಜ್ಞಾನಾರ್ಜನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು ತನ್ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು ಹಾಗೂ ಸಮಸ್ತರಿಗೂ ಒಳಿತಾಗಲಿ ಎಂದು ಆಶೀರ್ವದಿಸಿದರು. ಈ ಸಭೆಗೆ ಅನೇಕ ಸಂಖ್ಯೆಯಲ್ಲಿ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಎಂದಿನಂತೆ ಇಂದೂ ಕೂಡ ಶ್ರೀ ಮಠದ ಆವರಣದಲ್ಲಿ ನಾಡಿನ ಶ್ರೇಷ್ಟ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಇನ್ನೆರಡು ದಿನಗಳ ಧಾರ್ಮಿಕ ಕಾರ್ಯಕ್ರಮದ ಬಳಿಕ ಈ ಐತಿಹಾಸಿಕ ಮಹಾ ಕುಂಭಾಭಿಷೇಕ ಮಹೋತ್ಸವವು ಸಂಪನ್ನವಾಗಲಿದೆ.











0 Comments