ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುತ್ತಾ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜನರ ಸೇವೆಯನ್ನು ಇನ್ನಷ್ಟು ಉತ್ತಮವಾಗಿ ಹಾಗೂ ಇತರರಿಗೆ ಮಾದರಿಯಾಗಿ ನಿಂತ ವ್ಯಕ್ತಿ ಹೆಡ್ ಕಾನ್ಸ್ ಟೇಬಲ್ ಕೆ.ಆರ್ ನಂದೀಶ್.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಕಂಡರಕ್ಕಸೆದ ನಿವಾಸಿ ನಂದೀಶ್ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಠಾಣೆಯ ಕೆಲಸವನ್ನು ಮಾತ್ರ ಮಾಡದೇ ಇನ್ನೂರಕ್ಕೂ ಅಧಿಕ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿ ಇಡೀ ಸಮಾಜಕ್ಕೆ ಮಾದರಿಯಾಗಿ ನಿಂತ ವ್ಯಕ್ತಿ ಕೆ.ಆರ್ ನಂದೀಶ್.
ಮಾನವೀಯ ಮೌಲ್ಯಗಳ ಜೊತೆಗೆ ವೃತ್ತಿಯಲ್ಲಿ ಯಾವುದಾದರೂ ಕಾರ್ಯಾಚರಣೆ ಆರಂಭವಾದರೆ ಸಾಕು ಅತ್ಯಂತ ಚುರುಕಾಗಿ ಬೇಟೆಗಿಳಿಯುವ ನಂದೀಶ್ ಅವರು ಡ್ರಗ್ ಕುರಿತಾದ ಕಾರ್ಯಾಚರಣೆಯಲ್ಲಿ ನಿಸ್ಸೀಮರು. ಸುಮಾರು 112 ಪ್ರಕರಣಗಳಲ್ಲಿ 176 ಪೆಡ್ಲರ್‌ಗಳನ್ನು ಬಂಧಿಸಿ ಬರೋಬ್ಬರಿ 6.73 ಕೋಟಿ ರೂ ಮೊತ್ತದ ಮಾದಕ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದ ಹಿರಿಮೆ ನಂದೀಶ್ ಅವರದ್ದು.
ಈ ಎಲ್ಲಾ ಸಾಧನೆಗಳನ್ನು ಮಾಡಿರುವ ನಂದೀಶ್ ಅವರಿಗೆ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಪದಕ ಪ್ರಧಾನ ಕಾರ್ಯಕ್ರಮ ನಡೆಯಿತು. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಇಲಾಖೆಗೂ ಅಪ್ರತಿಮವಾದ ಸೇವೆ ಸಲ್ಲಿಸುತ್ತಾ ಸಮಾಜಕ್ಕೂ ಉತ್ತಮ ಸಂದೇಶ ನೀಡುತ್ತಿರುವ ನಂದೀಶ್ ಅವರ ಸೇವೆ ಅತ್ಯಂತ ಗೌರವಾರ್ಹವಾದದ್ದು.
ಅರ್ಜುನ್ ಸರ್ಜಾ, ಶೃತಿ ಹರಿಹರನ್ ಮೀಟೂ ಪ್ರಕರಣ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ, ಮಣಿಪಾಲ್ ಸಂಸ್ಥೆ 78 ಕೋಟಿ ವಂಚನೆ ಪ್ರಕರಣ ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಮುಖ್ಯಮಂತ್ರಿ ಪದಕ ಘೋಷಣೆ ಮಾಡಿರುವುದು ಅವರ ಆತ್ಮೀಯ ವಲಯ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಸಂತಸ ತಂದಿದೆ. ಈ ಕುರಿತು ಸಾರ್ವಜನಿಕರು ಹಾಗೂ ಅಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.








0 Comments