ಹಾಸನ : (ನ್ಯೂಸ್ ಮಲ್ನಾಡ್ ವರದಿ) 21ನೆಯ ಶತಮಾನದಲ್ಲೂ ಕೂಡ ಐವತ್ತಕ್ಕೂ ಅಧಿಕ ಜನರನ್ನು ಕೂಲಿ ಕೆಲಸ ನೀಡುವುದಾಗಿ ಕರೆದುಕೊಂಡು ಹೋಗಿ ಜೀತ ಪದ್ಧತಿಯಂತೆ ಬಳಸಿಕೊಂಡಿರುವ ಅಮಾನವೀಯ ಕೃತ್ಯ ಹಾಸನದಲ್ಲಿ ಹೊರಬಂದಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆಲಸ ಕೊಡಿಸುವ ಸುಳ್ಳು ಆಶ್ವಾಸನೆ ನೀಡಿ ನಿರ್ಗತಿಕ ಕಾರ್ಮಿಕರನ್ನು ಒಂದು ಶೆಡ್ ನಲ್ಲಿ ಕೂಡಿಹಾಕಿ ಸಮರ್ಪಕವಾದ ಊಟ ತಿಂಡಿಯನ್ನು ನೀಡದೆ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಇದಾಗಿದೆ.
ವಿಪರ್ಯಾಸವೆಂದರೆ ಈ ಕೃತ್ಯವನ್ನು ಎಸಗಿದ ಆರೋಪಿ ಕೆಲಸ ಎರಡು ವರ್ಷಗಳ ಹಿಂದೆಯೂ ಕೂಡ ಇದೇ ಕೃತ್ಯದಲ್ಲಿ ಭಾಗಿಯಾಗಿದ್ದ. ಆ ಸಂದರ್ಭದಲ್ಲೂ ಕೂಡ ಪೊಲೀಸರು ದಾಳಿ ನಡೆಸಿ ಅಮಾಯಕರನ್ನು ರಕ್ಷಣೆ ಮಾಡಿದ್ದರು. ಆಗಲೂ ಬಂಧಿತನಾಗಿದ್ದ ಮುನೇಶ್ ಕೆಲ ಸಮಯದ ನಂತರ ಜಾಮೀನು ಪಡೆದು ಹೊರಬಂದಿದ್ದ ಆದರೆ ಹೊರಬಂದ ನಂತರ ಮತ್ತೆ ಇಂಥಹುದೇ ಕೃತ್ಯವನ್ನು ಎಸಗಿರುವುದು ಅತ್ಯಂತ ಖಂಡನಾರ್ಹವಾಗಿದೆ.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಅರಸೀಕೆರೆ ಡಿವೈಎಸ್ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸಿ ದಾಳಿ ನಡೆಸಿ ಅಮಾಯಕರನ್ನು ಜೀತದಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಅಮಾಯಕರ ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ಹಾಸನ ಶಿವಮೊಗ್ಗ ಮಂಡ್ಯ ಸೇರಿದಂತೆ ಅನೇಕ ಕಡೆಗಳ ಕಾರ್ಮಿಕರು ಪೊಲೀಸರ ಈ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದಾರೆ.
ಬೆಳಗ್ಗೆ 5ರಿಂದ ಕತ್ತಲಾಗುವವರೆಗೂ ಕಾರ್ಮಿಕರನ್ನು ಶುಂಠಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಮುನೇಶ್ ಮಿನಿ ಲಾರಿಯೊಳಗೆ ಕುರಿಮಂದೆಯಂತೆ ಜನರನ್ನು ತುಂಬಿ ಕೆಲಸ ಮಾಡಿಸಿಕೊಳ್ಳುತ್ತಿದ್ದ. ಮುಖ್ಯವಾಗಿ ಅಷ್ಟೊಂದು ಜನರಿಗೆ ನೀಡಬೇಕಾಗಿದ್ದ ಯಾವುದೇ ಮೂಲಭೂತವಾದ ಸೌಕರ್ಯಗಳನ್ನು ನೀಡದೆ ಅಮಾನವೀಯವಾಗಿ ಅವರೊಂದಿಗೆ ವ್ಯವಹರಿಸಿದ್ದಾನೆ.
ಬಸ್ ನಿಲ್ದಾಣ ರೈಲ್ವೇ ನಿಲ್ದಾಣಗಳಲ್ಲಿ ಕೆಲಸವನ್ನರಸಿ ನಿರ್ಗತಿಕರಾಗಿ ಕಾಣುವ ಕಾರ್ಮಿಕರು ಮುನೇಶ್ ನ ಮುಖ್ಯ ಟಾರ್ಗೆಟ್. ಈ ರೀತಿ ಕಾಣುವ ವ್ಯಕ್ತಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅಲ್ಲಿಂದ ಶೆಡ್ ಗೆ ಕರೆದುಕೊಂಡು ಬಂದು ಅವರನ್ನು ಬಂಧನದಲ್ಲಿರಿಸಿ ಬೇಕಾಬಿಟ್ಟಿಯಾಗಿ ಅವರಿಂದ ಜೀತ ಪದ್ಧತಿಯಂತೆ ಕೆಲಸ ಮಾಡಿಸಿಕೊಳ್ಳುವುದು ಈತನ ಚಾಳಿಯಾಗಿದೆ.
ಈ ಹಿಂದೆಯೂ ಕೂಡ ಇದೆ ಕೃತ್ಯದಲ್ಲಿ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದವನು ಹೊರಬಂದ ನಂತರ ಇದೇ ಕ್ರೌರ್ಯವನ್ನು ಮುಂದುವರಿಸಿ ಅಮಾಯಕರ ಜೀವನದ ಜೊತೆಗೆ ವ್ಯವಹರಿಸಿರುವುದು ಸಾರ್ವಜನಿಕ ವಲಯದಲ್ಲಿ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದೆ. ಈ ಕುರಿತು ಪೊಲೀಸರು ಅಗತ್ಯ ಕಠಿಣ ಶಿಕ್ಷೆ ಗಳನ್ನು ಜಾರಿಗೊಳಿಸಿ ಈ ರೀತಿಯ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕಿದೆ.






0 Comments