ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ತಿಮಿಂಗಿಲ ಮೀನಿನ ವಾಂತಿಯನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ.
ಸಾಗರ ರೈಲ್ವೇ ನಿಲ್ದಾಣದ ಬಳಿ ತಿಮಿಂಗಿಲ ವಾಂತಿಯನ್ನು ಸಾಗಿಸುತ್ತಿದ್ದ ವಿಚಾರದ ಕುರಿತು ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಗಿಳಿದ ಪೊಲೀಸರು ಸಾಗರದ ಕೆಳದಿ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಮೂಡಿಗೆರೆ : ರಸ್ತೆಗಳ ಸಮರ್ಪಕ ಅಭಿವೃದ್ಧಿಗಾಗಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ; ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ
ಸಾಗರ ತಾಲ್ಲೂಕಿನ ಕೆಳದಿ ರಸ್ತೆಯ ರಾಮಪ್ಪ, ಕಾರ್ಗಲ್‌ನ ಸಂದೀಪ್ ಜಾನ್, ಸಾಗರ ನೆಹರೂ ನಗರದ ರೋಹಿತ್ ಬಂಧಿಸಲ್ಪಟ್ಟವರು. ಬಂಧಿತರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲ ವಾಂತಿಯನ್ನು ಪೊಲೀಸರು (ಅಂಬರ್ಗ್ರೀಸ್) ವಶಕ್ಕೆ ಪಡೆದಿದ್ದಾರೆ.
ಬಂಧಿತರ ಬಳಿ ಅರ್ಧ ಕೆ.ಜಿಯಷ್ಟು ತಿಮಿಂಗಿಲ ವಾಂತಿ ದೊರೆತಿದ್ದು ಇದನ್ನು ಸಾಗರದಿಂದ ಮಂಗಳೂರಿನ ಕಡೆಗೆ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಅರ್ಧ ಕೆಜಿ ತಿಮಿಂಗಿಲ ವಾಂತಿಯ ಬೆಲೆ 50 ಲಕ್ಷ ರೂಪಾಯಿ ಮೌಲ್ಯ ಎಂದು ಅಂದಾಜಿಸಲಾಗಿದ್ದು ಈ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ತಿಮಿಂಗಿಲ ವಾಂತಿಯ ಮಾರಾಟ ಹಾಗೂ ಸಾಗಾಣಿಕೆಯ ಮೇಲೆ ನಿಷೇಧವಿದ್ದು ಈ ಕೃತ್ಯದಲ್ಲಿ ಭಾಗಿಯಾಗಿರುವವರ ಮೇಲೆ ಹಾಗೂ ಈ ಕೃತ್ಯದ ಹಿಂದಿರುವವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಸಾಗರ ವಿಭಾಗದ ಎಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಾಗರ ನಗರ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಪಿಎಸ್ಸೈ ಟಿ.ಡಿ. ಸಾಗರಕರ್, ಕಾರ್ಗಲ್ ಪಿಎಸ್ಸೈ ತಿರುಮಲೇಶ್, ಸಿಬ್ಬಂದಿ ಸಂತೋಷ್ ನಾಯ್ಕ್, ಹಜರತ್ ಅಲಿ, ಪ್ರವೀಣ್ ಕುಮಾರ್, ರತ್ನಾಕರ್, ಮಲ್ಲೇಶ್, ಶ್ರೀಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




0 Comments