ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಈ ಹಿಂದೆ ಶಿವಮೊಗ್ಗದ ಎಸ್.ಪಿ ಆಗಿ ಕರ್ತವ್ಯ ನಿರ್ವಹಿಸಿದ್ದ ಅಭಿನವ್ ಖರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. 

ಇದನ್ನೂ ಓದಿ : ಜಯಪುರ : ಭೀಕರ ರಸ್ತೆ ಅಪಘಾತ ; ಓರ್ವ ಮಹಿಳೆ ಸಾವು ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ

ಅಭಿನವ್ ಖರೆ ಅವರು ಪ್ರಸ್ತುತ ಸಿಬಿಐ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಶಿವಮೊಗ್ಗದಲ್ಲಿ ಸಹ ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಆ ನಂತರ ಮೈಸೂರು ಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಹಣದ ವಿಚಾರವಾಗಿ ಶೃಂಗೇರಿ ಮೂಲದ ಉದ್ಯಮಿಯಾದ ಟಿಸಿ ರಾಜೇಂದ್ರ ಅವರ ಮೇಲೆ ಹಲ್ಲೆ ನಡೆಸಿ ಅವರ ಕೈ ಮೂಳೆ ಮುರಿಯುವಂತೆ ಗಂಭೀರವಾಗಿ ಹಲ್ಲೆ ನಡೆಸಿದ್ದರು ಎಂಬ ಆರೋಪ ಕಳೆದ ಏಳು ವರ್ಷಗಳ ಹಿಂದೆ ಕೇಳಿಬಂದಿತ್ತು. ಈ ಸಂಬಂಧ ದೂರು ಸಹ ದಾಖಲಾಗಿತ್ತು ಆದರೆ ಇಂತಹ ಯಾವುದೇ ಘಟನೆಗಳು ಎಸ್ಪಿ ಕಚೇರಿಯಲ್ಲಿ ನಡೆದಿಲ್ಲ ಎಂದು ಪೊಲೀಸರು ಬಿ. ರಿಪೋರ್ಟ್ ಹಾಕಿದ್ದರು ಆದರೆ ಮೈಸೂರಿನಲ್ಲಿ ಉದ್ಯಮಿಯಾಗಿದ್ದ ಟಿ.ಸಿ ರಾಜೇಂದ್ರ ಅವರು ಮಾನವ ಹಕ್ಕು ಆಯೋಗದ ಮೂಲಕ ಮೇಲಧಿಕಾರಿಗಳ ಮೊರೆ ಹೋಗಿ ಈ ಸಂಬಂಧ ಸೂಕ್ತ ತನಿಖೆ ಹಾಗೂ ಕ್ರಮ ಜರುಗಿಸುವಂತೆ ಕೋರಿದಾಗ ಎಸ್ಪಿ ಅಭಿನವ್ ಖರೆ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಟಿ.ಸಿ ರಾಜೇಂದ್ರ ಅವರು ತಿಳಿಸಿದ್ದಾರೆ. 

ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಸೂಚಿಸಿದ್ದು ಏಳು ವರ್ಷಗಳ ನಂತರದಲ್ಲಿ ಅಭಿನವ್ ಖರೆ ಅವರಿಗೆ ಸಮನ್ಸ್ ಜಾರಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ವಿನಾಕಾರಣ ಹಣದ ವಿಚಾರವಾಗಿ ಗಂಭೀರವಾಗಿ ಕೈ ಮೂಳೆ ಮುರಿಯುವಂತೆ ಟಿಸಿ ರಾಜೇಂದ್ರ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯ ಮೇಲೆ ಇದೀಗ ಕ್ರಮಕ್ಕೆ ಸೂಚನೆಯಾಗಿದೆ ಎಂದು ಟಿ.ಸಿ ರಾಜೇಂದ್ರ ಅವರು ತಿಳಿಸಿದರು.