ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದ ಅನೇಕ ವರ್ಷಗಳಿಂದ ನಕ್ಸಲರು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದ ದಟ್ಟ ಮಲೆನಾಡಿನ ಭಾಗಗಳಲ್ಲಿ ಇದೀಗ ನಕ್ಸಲ್ ಪಡೆಯ ನಾಯಕರು ಸೆರೆ ಸಿಕ್ಕ ನಂತರದಲ್ಲಿ ಸಂಪೂರ್ಣವಾಗಿ ನಕ್ಸಲ್ ಚಟುವಟಿಕೆಗಳು ಸ್ಥಬ್ಧವಾಗಿ ಇದೀಗ ಮಲೆನಾಡು ನಿರಾಳವಾಗಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ ; ಬೈಕ್ ಸವಾರನ ದುರ್ಮರಣ
ನಕ್ಸಲ್ ಚಟುವಟಿಕೆಗಳು ಹಾಗೂ ನಕ್ಸಲರ ಉಪಟಳ ಹೆಚ್ಚಾಗಿದ್ದ ಪ್ರದೇಶವಾದ ಮಲೆನಾಡಿನಲ್ಲಿ ಕೆಲ ತಿಂಗಳುಗಳ ಹಿಂದೆ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಹಾಗೂ ನಕ್ಸಲ್ ನಾಯಕಿ ಸಾವಿತ್ರಿಯನ್ನು ಕೇರಳದ ವಯನಾಡಿನಲ್ಲಿ ಖಾಕಿಪಡೆ ಬಂಧಿಸಿತ್ತು. ಈ ಇಬ್ಬರು ಪ್ರಮುಖರ ಬಂಧನದ ಮೊದಲೇ 2010 ರಲ್ಲಿ ವೆಂಕಟೇಶ್, ಜಯಾ, ಸರೋಜ, ಮಲ್ಲಿಕಾ, 2014 ರಲ್ಲಿ ಸಿರಿಮನೆ ನಾಗರಾಜ್, ನೂರ್ ಜಲ್ಫಿಕರ್, 2016 ರಲ್ಲಿ ಭಾರತಿ, ಫಾತಿಂ, ಪದ್ಮನಾಭ್, ಪರುಶುರಾಮ್, 2017 ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಸೇರಿದಂತೆ ಅನೇಕರು ಶರಣಾಗತರಾಗಿ ಸರ್ಕಾರದ ಪ್ಯಾಕೇಜ್ ಪಡೆಯಲು ಮುಂದಾಗಿದ್ದರು. ಆದರೆ ಈ ಇಬ್ಬರು ಪ್ರಮುಖರ ಬಂಧನದ ನಂತರದಲ್ಲಿ ಮಲೆನಾಡಿನಲ್ಲಿದ್ದ ಬಹುತೇಕ ನಕ್ಸಲ್ ಚಟುವಟಿಕೆಗಳು ಅಂತ್ಯಕಂಡಿದೆ.
ಕಳಚಿದ ನಕ್ಸಲ್ ನಾಯಕತ್ವದ ಕೊಂಡಿ
ಖಾಕಿ ಪಡೆಗೆ ಸಿಂಹಸ್ವಪ್ನವಾಗಿ ಕಾಡಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ನಿವಾಸಿ ಬಿ.ಜಿ ಕೃಷ್ಣಮೂರ್ತಿ ಮೇಲೆ 53 ಪ್ರಕರಣಗಳಿದ್ದು ಈ ಎಲ್ಲಾ ಪ್ರಕರಣಗಳ ವಿಚಾರಣೆ ಇದೀಗ ಸಂಬಂಧ ಪಟ್ಟ ಕೋರ್ಟ್ ಗಳಲ್ಲಿ ನಡೆಯುತ್ತಿದೆ. ಅಂತೆಯೇ ಕಳಸ ಮೂಲದ ಸಾವಿತ್ರಿಯ ವಿಚಾರಣೆ ಸಹ ಸಂಬಂಧಿಸಿದ ಕೋರ್ಟ್ ಗಳಲ್ಲಿ ನಡೆಯುತ್ತಿದೆ.
ಮಲೆನಾಡಿನ ದಟ್ಟ ಅರಣ್ಯಗಳಲ್ಲಿ ಭೂಗತರಾಗಿ ಅನೇಕ ವರ್ಷಗಳ ಕಾಲ ಕಾನನವಾಸ ನಡೆಸುತ್ತಿದ್ದ ನಕ್ಸಲ್ ನ ಹಿರಿಯ ತಲೆಗಳು ಪೊಲೀಸರ ಬಲೆಗೆ ಬೀಳುತ್ತಿದ್ದಂತೆಯೇ ಮಲೆನಾಡು ಭಾಗದಲ್ಲಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆಗಳಿಗೆ ಲಗಾಮ್ ಬಿದ್ದಂತಾಗಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆಗಳ ಮೂಲ ಆಧಾರ ಸ್ಥಂಭಗಳೆರಡು ಉರುಳಿದ ಪರಿಣಾಮ ಈ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಮಲೆನಾಡಿನ ನಕ್ಸಲ್ ನಾಯಕತ್ವದ ಬಹುದೊಡ್ಡ ಕೊಂಡಿಯೊಂದು ಜೈಲು ಪಾಲಾಗಿದೆ.
ಚಿಕ್ಕಮಗಳೂರು ಶಿವಮೊಗ್ಗದಲ್ಲೂ ನಕ್ಸಲ್ ನಿಗ್ರಹ ದಳದ ಕ್ಯಾಂಪ್ ಆ್ಯಕ್ಟಿವ್ :
ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ, ಸಾವಿತ್ರಿ ಹಾಗೂ ಹೊಸಗದ್ದೆ ಪ್ರಭಾ ಬಂಧನದ ನಂತರ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಬಹುತೇಕ ಅಂತ್ಯ ಕಂಡಿದೆ. ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಈ ಭಾಗದ ಶ್ರೀಮತಿ, ಹಿತ್ತಲ ಮನೆ ರವೀಂದ್ರ ಅಲಿಯಾಸ್ ಕೋಟೆಹೊಂಡ ರವಿ, ವಿಕ್ರಂ ಗೌಡ ಹಾಗೂ ಮುಂಡಗಾರು ಲತಾ ಬಂಧನವಾಗಬೇಕಿದೆ. ಪ್ರಸ್ತುತ ದೇವಲಕೊಪ್ಪ, ಕಿಗ್ಗಾ, ಕೆರೆಕಟ್ಟೆ, ಜಯಪುರ, ಆಗುಂಬೆ ಸೇರಿದಂತೆ ನಕ್ಸಲ್ ನಿಗ್ರಹ ದಳದ ಕ್ಯಾಂಪ್ ಗಳು ಆ್ಯಕ್ಟಿವ್ ಆಗಿದ್ದು ಕೂಂಬಿಂಗ್ ಗಳು ನಿರಂತರವಾಗಿ ನಡೆಯುತ್ತಿದ್ದು ಮಲೆನಾಡಿಗರ ನೆಮ್ಮದಿಗಾಗಿ ಶ್ರಮಿಸುತ್ತದೆ.
ಮಾತೃ ಇಲಾಖೆಯತ್ತ ಮುಖಮಾಡಲು ANF ಸಿಬ್ಬಂದಿ ಸಜ್ಜು :
ನಕ್ಸಲ್ ಪ್ರದೇಶಗಳೆಂದು ಗುರುತಿಸಿಕೊಂಡ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸಿದ್ದು ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಸಂಖ್ಯೆಯಲ್ಲಿ ಕಡಿತಗೊಳಿಸಲು ಸರ್ಕಾರ ಮುಂದಾಗಿದ್ದು ನಕ್ಸಲ್ ನಿಗ್ರಹ ಪಡೆಯಲ್ಲಿದ್ದ ಸಿಬ್ಬಂದಿಗಳಲ್ಲಿ ಕೆಲವರು ಮಾತೃ ಇಲಾಖೆಗೆ ಮರಳಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಮಲೆನಾಡಿನ ಅರಣ್ಯದಂಚಿನಲ್ಲಿ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡು ತೀವ್ರಗೊಳ್ಳುತ್ತಿದ್ದಂತೆ ಸರ್ಕಾರ 2005ರಲ್ಲಿ ನಕ್ಸಲ್ ನಿಗ್ರಹ ಪಡೆ ರಚಿಸಿತು. ಹಿರಿಯ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ನಕ್ಸಲ್ ನಿಗ್ರಹ ದಳದ ಮೊದಲ ಎಸ್ಪಿಯಾಗಿ ನೇಮಕಗೊಂಡಿದ್ದರು.
ನಕ್ಸಲ್ ನಿಗ್ರಹ ಪಡೆಗೆ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿಶೇಷ ತರಬೇತಿ ನೀಡಿ ಕಾಡಿನಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ನಕ್ಸಲ್ ಚಟುವಟಿಕೆಗೆ ಕಡಿವಾಣ ಹಾಕಲು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯಲ್ಲಿ ಎಎನ್‌ಎಫ್ ತಂಡಗಳು ಕಾರ್ಯಾಚರಣೆ ಆರಂಭಿಸಿದವು.
ನಕ್ಸಲ್ ನಿಗ್ರಹ ತಂಡದ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ :
ಮಲೆನಾಡಿನ ಕಾಡಂಚಿನಲ್ಲಿ ನಕ್ಸಲ್ ಚಟುವಟಿಕೆ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಮೂರು ಜಿಲ್ಲೆಗಳಲ್ಲಿ 10 ಕ್ಯಾಂಪ್‌ಗಳನ್ನು ತೆರೆಯಲಾಗಿತ್ತು. ಚಿಕ್ಕಮಗಳೂರು ಜಿಲ್ಲೆ ದ್ಯಾವಲಕೊಪ್ಪ, ಕಿಗ್ಗ, ಕೆರೆಕಟ್ಟೆ, ಜಯಪುರ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ಸೇರಿದಂತೆ ಇತರೆಡೆಗಳಲ್ಲಿ ಕ್ಯಾಂಪ್ ಆರಂಭಗೊಂಡಿತು. ಪ್ರತೀ ಕ್ಯಾಂಪ್‌ನಲ್ಲಿ 30 ರಿಂದ 35 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿತ್ತು. ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಿಸಲಾಗುತ್ತಿತ್ತು. ನಕ್ಸಲ್ ನಿಗ್ರಹ ಪಡೆ ಮಲೆನಾಡಿನ ಕಾಡಂಚಿನಲ್ಲಿ ಕಾರ್ಯಾಚರಣೆಗೆ ಇಳಿದ ಮೇಲೆ ಹಲವೆಡೆ ನಕ್ಸಲರು ಮತ್ತು ಎಎನ್ ಎಫ್ ತಂಡಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಅನೇಕ ನಕ್ಸಲರು ನಕ್ಸಲ್ ನಿಗ್ರಹ ಪಡೆಯ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ದಿನದಿಂದ ದಿನಕ್ಕೆ ನಕ್ಸಲ್ ನಿಗ್ರಹ ದಳದ ಕೂಬಿಂಗ್ ಕಾರ್ಯಾಚರಣೆ ಬಿರುಸುಗೊಳ್ಳುತ್ತಿದ್ದಂತೆ ನಕ್ಸಲ್ ಚಟುವಟಿಕೆ ನಿಧಾನವಾಗಿ ಕ್ಷೀಣಿಸಲು ಆರಂಭಿಸಿದ್ದು, ಮಲೆನಾಡಿನ ಕಾಡಂಚಿನಲ್ಲಿದ್ದ ನಕ್ಸಲರು ಕೇರಳದತ್ತ ಮುಖ ಮಾಡಿದರು. ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸುತ್ತಿದ್ದಂತೆ ನಕ್ಸಲ್ ನಿಗ್ರಹ ತಂಡದ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ ಚಿಂತಿಸಿದೆ. 10 ತಂಡಗಳ ಸಂಖ್ಯೆಯನ್ನು 5 ತಂಡಕ್ಕೆ ಇಳಿಸಲು ಮುಂದಾಗಿದ್ದು, ಸಿಬ್ಬಂದಿ ಮಾತೃ ಇಲಾಖೆಗೆ ಮರಳಲಾರಂಭಿಸಿದ್ದಾರೆ ಎನ್ನಲಾಗುತ್ತಿದೆ.


.jpeg)
.jpg)
.jpg)


.jpeg)

.jpeg)



0 Comments